ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಆರೋಪಗಳ ಸುರಿಮಳೆಗೈದಿದ್ದು, ಕೇಜ್ರಿವಾಲ್ ಸರ್ವಾಧಿಕಾರಿಯ ರೀತಿಯಲ್ಲಿ, ಖಾಸಗಿ ಸಂಸ್ಥೆಯ ಅಧ್ಯಕ್ಷರಂತೆ ಆಪ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಕೇಜ್ರಿವಾಲ್ ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಆಮ್ ಆದ್ಮಿ ಪಕ್ಷದ 14 ಶಾಸಕರು ಹಿಂಸಾಚಾರದಿಂದ ಹಿಡಿದು ಲೈಂಗಿಕ ಕಿರುಕುಳದ ವರೆಗೂ ವಿವಿಧ ಆರೋಪಗಳಡಿಯಲ್ಲಿ ಬಂಧಿತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಖ್ಯಕಾರ್ಯದರ್ಶಿಗಳ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕರು ಹಲ್ಲೆ ನಡೆಸಿದ್ದ ಹಲ್ಲೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಬಿಜೆಪಿ ಪರವಾಗಿ ವರ್ತಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು.
ಅಮಿತ್ ಶಾ ಪ್ರಜಾಪ್ರಭುತ್ವ ರೀತಿಯಲ್ಲಿ ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ ದೆಹಲಿ ಸಿಎಂ ಕೇಜ್ರಿವಾಲ್ ಮಾತ್ರ ಖಾಸಗಿ ಸಂಸ್ಥೆಯ ಅಧ್ಯಕ್ಷರಂತೆ ಆಪ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಸಂಬಿತ್ ಪಾತ್ರ ವಾಗ್ದಾಳಿ ನಡೆಸಿದ್ದಾರೆ.