ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾರತ ಮತ್ತು ಕೆನಡಾ ಪ್ರಧಾನಿಗಳು ಮತ್ತು ಸರ್ಕಾರಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳು
ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾರತ ಮತ್ತು ಕೆನಡಾ ಪ್ರಧಾನಿಗಳು ಮತ್ತು ಸರ್ಕಾರಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳು

ದೇಶಗಳ ಐಕ್ಯತೆ ಮತ್ತು ಸಮಗ್ರತೆಯನ್ನು ಪ್ರಶ್ನಿಸುವವರನ್ನು ನಾವು ಸಹಿಸುವುದಿಲ್ಲ: ಪ್ರಧಾನಿ ಮೋದಿ

ರಾಜಕೀಯ ಪ್ರೇರಣೆಗಳಿಗೆ ಮತ್ತು ಪ್ರತ್ಯೇಕತಾವಾದವನ್ನು ಪ್ರಚುರಪಡಿಸಲು ರಾಜಕೀಯವನ್ನು ...
Published on

ನವದೆಹಲಿ: ರಾಜಕೀಯ ಪ್ರೇರಣೆಗಳಿಗೆ ಮತ್ತು ಪ್ರತ್ಯೇಕತಾವಾದವನ್ನು ಪ್ರಚುರಪಡಿಸಲು ರಾಜಕೀಯವನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಅವಕಾಶ ಮಾಡಿಕೊಡಬಾರದು. ನಮ್ಮ ಏಕತೆ ಮತ್ತು ಸಮಗ್ರತೆಗೆ ಸವಾಲೆಸೆಯುವವರನ್ನು ನಾವು ಸಹಿಸುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರನ್ನು ಬರಮಾಡಿಕೊಂಡ ನಂತರ ನಿಲುವಳಿ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಭಾರತ ಮತ್ತು ಕೆನಡಾ ದೇಶಗಳು ಆರು ಒಪ್ಪಂದಗಳಿಗೆ ಸಹಿ ಹಾಕಿವೆ. ನಂತರ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ತಾವು ಮತ್ತು ಕೆನಡಾ ಪ್ರಧಾನಿ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದ್ದು ರಕ್ಷಣಾ ಕಾರ್ಯ, ಭಯೋತ್ಪಾದನೆ ಮತ್ತು ತೀವ್ರಗಾಮಿತ್ವಗಳು ಇಂದು ದೇಶಗಳ ಬೆಳವಣಿಗೆಗೆ ಹೇಗೆ ಬೆದರಿಕೆಯಾಗಿವೆ ಮತ್ತು ಅವುಗಳನ್ನು ಹೊಡೆದೋಡಿಸಲು ಒಗ್ಗಟ್ಟಿನಿಂದ ಹೋರಾಡುವ ಅಗತ್ಯಗಳ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಕೆನಡಾ ಜೊತೆ ಕಾರ್ಯತಂತ್ರದ ಸಹಭಾಗಿತ್ವವನ್ನು ಮುಂದುವರಿಸಲು ಭಾರತ ಅಧಿಕ ಮಹತ್ವ ನೀಡುತ್ತದೆ. ಉತ್ತರ ಕೊರಿಯಾ ಮತ್ತು ಮಾಲ್ಡೀವ್ಸ್ ವಿಚಾರದಲ್ಲಿ ನಾವು ಸಮಾನ ಆಲೋಚನೆಗಳನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಕೆನಡಾ ದೇಶ ಅತಿ ಹೆಚ್ಚು ಇಂಧನ ಶಕ್ತಿ ಹೊಂದಿರುವ ದೇಶವಾಗಿದ್ದು ನಮ್ಮ ದೇಶದ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಕೂಡ ಪೂರೈಸಲಿದೆ. ಅಲ್ಲದೆ ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವ ಭಾರತೀಯ ವಿದ್ಯಾರ್ಥಿಗಳಿಗೆ ಕೆನಡಾ ಒಂದು ಅತ್ಯುತ್ತಮ ದೇಶ, ಇಂದು 1 ಲಕ್ಷದ 20 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ನಿಲುವಳಿ ಒಪ್ಪಂದವನ್ನು ನವೀಕರಿಸಿದ್ದು ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಪರಸ್ಪರ ಸಹಕಾರವನ್ನು ವಿಸ್ತರಿಸಲು ಸಹಾಯವಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮಾತನಾಡಿ, ಶ್ರೀಮಂತ ಇತಿಹಾಸವನ್ನು ಮಾತ್ರ ಕೆನಡಾ ಮತ್ತು ಭಾರತ ದೇಶಗಳು ಹಂಚಿಕೊಳ್ಳುವುದಲ್ಲದೆ ಸಹಜ ಸ್ನೇಹವನ್ನು ಪ್ರೋತ್ಸಾಹಿಸುವ ಕೆಲವು ಮೌಲ್ಯಗಳನ್ನು ಪ್ರೋತ್ಸಾಹಿಸುತ್ತದೆ. ತನ್ನ ಗಡಿಯನ್ನು ಮೀರಿ ಉದ್ಯಮದಲ್ಲಿ ಹೊಸ ಅವಕಾಶಗಳನ್ನು ಎದುರು ನೋಡುತ್ತಿರುವ ಕೆನಡಾ ತನ್ನ ದೇಶದ ಆರ್ಥಿಕತೆಯಲ್ಲಿ ವೈವಿಧ್ಯತೆಯನ್ನು ಬಯಸುತ್ತಿದೆ. ವಾಣಿಜ್ಯ ಸಹಕಾರಕ್ಕೆ ಭಾರತ ದೇಶ ಸಹಜ ಪಾಲುದಾರವಾಗಿದ್ದು ನಂಬಿಕೆಯ ಸ್ನೇಹ ರಾಷ್ಟ್ರವಾಗಿದೆ ಎಂದು ಶ್ಲಾಘಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com