5ಜಿ ತಂತ್ರಜ್ಞಾನ ಬೇಡ: ಮಹಾ ಸಿಎಂಗೆ ನಟಿ ಜ್ಯೂಹಿ ಚಾವ್ಲಾ ಪತ್ರ

ನೂತನ 5ಜಿ ತಂತ್ರಜ್ಞಾನಕ್ಕಾಗಿ ಟೆಲಿಕಾಂ ಸಂಸ್ಥೆಗಳು ಮುಗಿಬಿದ್ದಿರುವಂತೆಯೇ ಇತ್ತ ಬಾಲಿವುಡ್ ನಟಿ ಜ್ಯೂಹಿ ಚಾವ್ಲಾ ಮಾತ್ರ 5ಜಿ ತಂತ್ರಜ್ಞಾನ ಬೇಡವೇ ಬೇಡ ಎಂದು ಹೇಳುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ನೂತನ 5ಜಿ ತಂತ್ರಜ್ಞಾನಕ್ಕಾಗಿ ಟೆಲಿಕಾಂ ಸಂಸ್ಥೆಗಳು ಮುಗಿಬಿದ್ದಿರುವಂತೆಯೇ ಇತ್ತ ಬಾಲಿವುಡ್ ನಟಿ ಜ್ಯೂಹಿ ಚಾವ್ಲಾ ಮಾತ್ರ 5ಜಿ ತಂತ್ರಜ್ಞಾನ ಬೇಡವೇ ಬೇಡ ಎಂದು ಹೇಳುತ್ತಿದ್ದಾರೆ.
ಅಷ್ಟು ಮಾತ್ರವಲ್ಲದೇ ಸರ್ಕಾರಕ್ಕೂ ಪತ್ರ ಬರೆದಿರುವ ಜ್ಯೂಹಿ ಚಾವ್ಲಾ, ಯಾವುದೇ ಕಾರಣಕ್ಕೂ 5ಜಿ ತಂತ್ರಜ್ಞಾನ ಅನುಷ್ಠಾನ ಬೇಡ.. ಇದರಿಂದಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. 
ಮಾನವ ಆರೋಗ್ಯದ ಮೇಲೆ ರೇಡಿಯೊ ಫ್ರೀಕ್ವೆನ್ಸಿಯ ವಿಕಿರಣದಿಂದ ಆಗುವ ಸಂಭಾವ್ಯ ಹಾನಿಕಾರಕ ಪರಿಣಾಮಗಳ ಬಗ್ಗೆ ವಿಶ್ಲೇಷಿಸದೇ 5ಜಿ ಮೊಬೈಲ್ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಬಾರದು ಎಂದು ವಿಕಿರಣ ಜಾಗೃತಿ ಅಭಿಯಾನದ ಕಾರ್ಯಕರ್ತೆ ಕೂಡ ಆಗಿರುವ ಜೂಹಿ ಚಾವ್ಲಾ ಆಗ್ರಹಿಸಿದ್ದಾರೆ. ಡಿಜಿಟಲ್ ಇಂಡಿಯಾ ಗುರಿ ಸಾಧನೆ ನಿಟ್ಟಿನಲ್ಲಿ 5ಜಿ ಅನುಷ್ಠಾನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಹೊಸ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಸಂಶೋಧನೆ ಕೈಗೊಂಡಿದೆಯೇ ಎಂದು ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಈ ಸಂಬಂಧ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿರುವ ಚಾವ್ಲಾ, ಮೊಬೈಲ್ ಟವರ್ ಆಂಟೆನಾಗಳಿಂದ ಹಾಗೂ ವೈ ಫೈ ಹಾಟ್‌ಸ್ಪಾಟ್‌ಗಳ ಎಲೆಕ್ಟ್ರೋ ಮ್ಯಾಗ್ನಟಿಕ್ ರೇಡಿಯೇಷನ್ (ಇಎಂಎಫ್) ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. 
"ಹಲವು ಮಂದಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಜ್ಞಾನಿಗಳು, ಸಾಂಕ್ರಾಮಿಕ ರೋಗ ತಜ್ಞರು ಮತ್ತು ತಂತ್ರಜ್ಞಾನ ಕ್ಷೇತ್ರದ ವೃತ್ತಿಪರರು, ಮಾನವ ಆರೋಗ್ಯದ ಮೇಲೆ ರೇಡಿಯೊಫ್ರೀಕ್ವೆನ್ಸಿ ವಿಕಿರಣದ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಿಟಿಜನ್ ಫಾರ್ ಟುಮಾರೊ’ ಆಂದೋಲನ ಹಮ್ಮಿಕೊಂಡಿರುವ ನಟಿ, ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಗುರಿಸಾಧನೆಯ ಸಲುವಾಗಿ 5ಜಿ ತಂತ್ರಜ್ಞಾನವನ್ನು ಅನುಷ್ಠಾನಕ್ಕೆ ತರುವ ಅಂಧ ನಿರ್ಧಾರ ಕೈಗೊಂಡಿದೆ. ಉತ್ತಮ ಇಮಟರ್‌ನೆಟ್ ವೇಗ ಮತ್ತು ನೆಟ್‌ವರ್ಕ್ ಸುಧಾರಣೆ ನಿಟ್ಟಿನಲ್ಲಿ ಸರ್ಕಾರ 5ಜಿ ಸ್ಥಾಪನೆಗೆ ಮುಂದಾಗಿದೆ. ಆದರೆ ಅದರ ವ್ಯತಿರಿಕ್ತ ಪರಿಣಾಮವನ್ನು ಮರೆತಿದೆ ಎಂದು ಜ್ಯೂಹಿ ಚಾವ್ಲಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com