ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು ಚೆನ್ನೈನ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಂಚಿ ಕಾಮಕೋಟಿ ಪೀಠದ 69ನೇ ಪೀಠಾಧಿಪತಿಗಳಾಗಿದ್ದ ಜಯೇಂದ್ರ ಸರಸ್ವತಿ ಸ್ವಾಮೀಜಿಯನ್ನು 1954ರ ಮಾರ್ಚ್ 22ರಂದು ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಶಿಷ್ಯರನ್ನಾಗಿ ಸ್ವೀಕರಿಸಿದ್ದರು. 1994ರಲ್ಲಿ ಹಿರಿಯ ಗುರುಗಳು ಮುಕ್ತರಾದ ನಂತರ ಪೀಠದ ಸಂಪೂರ್ಣ ಹೊಣೆ ಹೊತ್ತಿದ್ದರು.
ತಂಜಾವೂರು ಜಿಲ್ಲೆಯ ಇರುಲ್ನಕ್ಕಿ ಎಂಬಲ್ಲಿ 1935ರ ಜುಲೈ 18ರಂದು ಜನಿಸಿದ್ದ ಶ್ರೀಗಳ ಪೂರ್ವಾಶ್ರಮದ ಹೆಸರು ಸುಬ್ರಮಣಿಯಂ. ಮಹಾದೇವ ಅಯ್ಯರ್, ಸರಸ್ವತಿ ದಂಪತಿಯ ಹಿರಿಯ ಪುತ್ರರಾಗಿರುವ ಅವರು, ವಿಲ್ಲುಪುರಂ ಎಲಿಮೆಂಟರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರು.
1943ರ ಮೇ 9ರಂದು ಬ್ರಹ್ಮೋಪದೇಶ ಪಡೆದ ಶ್ರೀಗಳು, ಶಂಕರಾಚಾರ್ಯ ಮಠದ ಜಗದ್ಗುರು ವಿದ್ಯಾಸಂಸ್ಥಾನದಲ್ಲಿ ವೇದಾಧ್ಯಯನ ಮಾಡಿ 1948ರ ವೇಳೆಗೆ ಋಗ್ವೇದ ಸಂಹಿತಾ ಅಧ್ಯಯನ ಪೂರ್ಣಗೊಳಿಸಿದ್ದರು.