ಲಂಡನ್ ಹೊಟೆಲ್ ನಲ್ಲಿ ಬೆಳ್ಳಿ ಸಾಮಾನು ಕದ್ದು ಭಾರತದ ಮಾನ ಹರಾಜು ಹಾಕಿದ ಪಶ್ಚಿಮ ಬಂಗಾಳ ಪತ್ರಕರ್ತರು

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಜೊತೆ ಲಂಡನ್‌ಗೆ ತೆರಳಿದ್ದ ಹಿರಿಯ ಪತ್ರಕರ್ತರೊಬ್ಬರು ಅಲ್ಲಿನ ಪ್ರತಿಷ್ಟಿತ ಹೊಟೆಲ್ ನಲ್ಲಿ ಬೆಳ್ಳಿ ಸಾಮಾನುಗಳನ್ನು ಕದ್ದು ಸಿಕ್ಕಿಬೀಳುವ ಮೂಲಕ ಭಾರತದ ಮಾನ ಹರಾಜಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಜೊತೆ ಲಂಡನ್‌ಗೆ ತೆರಳಿದ್ದ ಹಿರಿಯ ಪತ್ರಕರ್ತರೊಬ್ಬರು ಅಲ್ಲಿನ ಪ್ರತಿಷ್ಟಿತ ಹೊಟೆಲ್ ನಲ್ಲಿ ಬೆಳ್ಳಿ ಸಾಮಾನುಗಳನ್ನು ಕದ್ದು ಸಿಕ್ಕಿಬೀಳುವ ಮೂಲಕ  ಭಾರತದ ಮಾನ ಹರಾಜಾಗಿದೆ.
ಮಮತಾ ಬ್ಯಾನರ್ಜಿ ಅವರಿಗಾಗಿ ಲಂಡನ್‌ನ ಪ್ರತಿಷ್ಠಿತ ಹೊಟೇಲ್‌ನಲ್ಲಿ ಭೋಜನಕೂಟವನ್ನು ಏರ್ಪಡಿಸಲಾಗಿತ್ತು. ಬ್ಯಾನರ್ಜಿಯವರ ಜೊತೆ ಭೋಜನಕೂಟದಲ್ಲಿ ಭಾರತ ಮತ್ತು ಬ್ರಿಟನ್‌ ನ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು,  ಕೈಗಾರಿಕೋದ್ಯಮಿಗಳು ಮತ್ತು ಪತ್ರಕರ್ತರು ಉಪಸ್ಥಿತರಿದ್ದರು. ಮಮತಾ ಅವರ ಜೊತೆ ತೆರಳಿದ್ದ ಪತ್ರಕರ್ತರ ತಂಡದಲ್ಲಿ ಹಿರಿಯ ಪತ್ರಕರ್ತರೇ ಇದ್ದರು. ಮೊದಲಿಗೆ ಒಬ್ಬ ಪತ್ರಕರ್ತ ಬೆಳ್ಳಿ ಚಮಚವನ್ನು ತನ್ನ ಬ್ಯಾಗಿಗೆ  ಹಾಕಿಕೊಂಡಿದ್ದು, ಇದನ್ನು ಗಮನಿಸಿದ ಅದೇ ತಂಡದ ಇತರೆ ಪತ್ರಕರ್ತರು ಕೂಡಾ ಬೆಳ್ಳಿಯ ಪಾತ್ರೆಗಳನ್ನು ತಮ್ಮ ಚೀಲಗಳಲ್ಲಿ ತುಂಬಿಸಲು ಆರಂಭಿಸಿದರು. 
ಪತ್ರಕರ್ತರ ಈ ಕಾರ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗುತ್ತಿತ್ತು. ಹೊಟೇಲ್ ಸಿಬ್ಬಂದಿ ಆರಂಭದಲ್ಲಿ ಈ ಬಗ್ಗೆ ವೌನವಾಗಿದ್ದರಾದರೂ, ಅದು ಅತಿರೇಕಕ್ಕೆ ತಲುಪಿದಾಗ ಪತ್ರಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.  ಕೇವಲ ಅಷ್ಟು ಮಾತ್ರವಲ್ಲದೇ ಈ ಬಗ್ಗೆ ಅಲ್ಲಿನ ಸ್ಥಳೀಯ ಪತ್ರಿಕೆಗಳು ಈ ಬಗ್ಗೆ ವರದಿ ಮಾಡಿದ್ದು, ಮಮತಾ ಬ್ಯಾನರ್ಜಿ ಮತ್ತು ಅವರ ತಂಡ ಇದೀಗ ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿದೆ. 
ಭಾರತದಿಂದ ಬಂದ ಗಣ್ಯರಿಗೆ ಮುಜುಗರ ಉಂಟುಮಾಡಬಾರದು ಎಂಬ ಕಾರಣಕ್ಕೆ ಹೊಟೇಲ್ ಸಿಬ್ಬಂದಿ ಎಲ್ಲ ತಿಳಿದಿದ್ದರೂ ವೌನವಾಗಿರಲು ನಿರ್ಧರಿಸಿದ್ದರು. ಆದರೆ ಪರಿಸ್ಥಿತಿ ಮಿತಿಮೀರಿದಾಗ ಈ ಬಗ್ಗೆ ಪತ್ರಕರ್ತರಿಗೆ ಸೂಚನೆ  ನೀಡಿದ ಸಿಬ್ಬಂದಿ ಸಿಸಿ ಕ್ಯಾಮೆರಾವು ಎಲ್ಲವನ್ನೂ ಸೆರೆ ಹಿಡಿದಿರುವುದಾಗಿ ತಿಳಿಸಿದಾಗ ಬಹುತೇಕ ಪತ್ರಕರ್ತರಿಗೆ ಮುಜುಗರವಾಗಿತ್ತು. ಅವರೆಲ್ಲ ತಮ್ಮ ಬಳಿಯಿದ್ದ ಬೆಳ್ಳಿಯ ಪಾತ್ರೆಗಳನ್ನು ಟೇಬಲ್ ಮೇಲೆ ಇಟ್ಟಿದ್ದರು ಎಂದು ಅಲ್ಲಿನ  ಸಿಬ್ಬಂದಿ ತಿಳಿಸಿರುವುದಾಗಿ ಔಟ್ ಲುಕ್ ಪತ್ರಿಕೆ ವರದಿ ಮಾಡಿವೆ.
ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪತ್ರಕರ್ತ ವಾದ ಮಾಡಿ ದಂಡ ಕಟ್ಟಿದ
ಇನ್ನು ಅದೇ ತಂಡದಲ್ಲಿದ್ದ ಓರ್ವ ಹಿರಿಯ ಪತ್ರಕರ್ತರು ಮಾತ್ರ ತಾನೇನೂ ತಪ್ಪು ಮಾಡಿಲ್ಲ ಎಂದು ವಾದಿಸಲು ಆರಂಭಿಸಿ ಬೇಕಾದರೆ ತನ್ನ ತಪಾಸಣೆ ನಡೆಸುವಂತೆ ಹೇಳಿದ್ದರು. ಆದರೆ ಅವರು ಅದಕ್ಕೂ ಮೊದಲು ತಮ್ಮ ಬಳಿಯಿದ್ದ  ಬೆಳ್ಳಿಯ ಸಾಮಾಗ್ರಿಗಳನ್ನು ಮತ್ತೊಬ್ಬ ಪತ್ರಕರ್ತರ ಚೀಲದೊಳಗೆ ಹಾಕಿರುವುದು ಕೂಡಾ ಕ್ಯಾಮೆರಾದಲ್ಲಿ ದಾಖಲಾಗಿರುವುದು ಅವರಿಗೆ ತಿಳಿದಿರಲಿಲ್ಲ. ಕೋಪಗೊಂಡ ಹೊಟೇಲ್ ಸಿಬ್ಬಂದಿ ಅವರಿಗೆ 50 ಪೌಂಡ್ ದಂಡ ಕಟ್ಟುವ  ಸೂಚಿಸಿತು. ಕೊನೆಯಲ್ಲಿ ದಂಡ ಕಟ್ಟಿದ ಆ ಪತ್ರಕರ್ತ ಹೊಟೇಲ್‌ನಿಂದ ಹೊರನಡೆದರು ಎಂದು ಲಂಡನ್ ಪತ್ರಿಕೆಗಳು ವರದಿ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com