ಮಹಾರಾಷ್ಟ್ರದಲ್ಲಿ ದೋಣಿ ದುರಂತ: 4 ಸಾವು, 35 ವಿದ್ಯಾರ್ಥಿಗಳ ರಕ್ಷಣೆ
ಮಹಾರಾಷ್ಟ್ರದ ದಾಹನು ಕಡಲತೀರದಲ್ಲಿ 40 ಶಾಲಾ ವಿದ್ಯಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ನೀರಿನಲ್ಲಿ ಮುಳುಗಿದ ಪರಿಣಾಮ ನಾಲ್ವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಶನಿವಾರ ನಡೆದಿದೆ...
ಮಹಾರಾಷ್ಟ್ರದಲ್ಲಿ ದೋಣಿ ದುರಂತ: 4 ಸಾವು, 35 ವಿದ್ಯಾರ್ಥಿಗಳ ರಕ್ಷಣೆ
ಮುಂಬೈ: ಮಹಾರಾಷ್ಟ್ರದ ದಾಹನು ಕಡಲತೀರದಲ್ಲಿ 40 ಶಾಲಾ ವಿದ್ಯಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ನೀರಿನಲ್ಲಿ ಮುಳುಗಿದ ಪರಿಣಾಮ ನಾಲ್ವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಶನಿವಾರ ನಡೆದಿದೆ.
ದುರಂತ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳೂ ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಈವರೆಗೂ 35 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆಂದು ತಿಳಿದುಬಂದಿದೆ.
ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ವಿದ್ಯಾರ್ಥಿಗಳ ಗುರುತು ಪತ್ತೆಯಾಗಿಲ್ಲ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಹೆಲಿಕಾಪ್ಟರ್ ಗಳ ಮೂಲಕವೂ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಕಾರ್ಯಾಚರಣೆ ಪ್ರಗತಿಯಲ್ಲಿರುವ ಹಿನ್ನಲೆಯಲ್ಲಿ, ರಕ್ಷಣಾ ಕಾರ್ಯಾಚರಣೆಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಬಾರದೆಂಬ ಕಾರಣಕ್ಕೆ ಈ ಮಾರ್ಗವಾಗಿ ಬರುತ್ತಿದ್ದ ದೋಣಿಗಳ ದಿಕ್ಕುಗಳನ್ನು ಬದಲಿಸಿ, ಬೇರೆ ದಾರಿಯಲ್ಲಿ ಚಲಿಸುವಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಇಂದು ಬೆಳಿಗ್ಗೆ 11.30ರ ಸುಮಾರಿಗೆ ದುರಂತ ಸಂಭವಿಸಿದೆ. ದೋಣಿಯಲ್ಲಿ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದ ಪರಿಣಾಮ ದುರಂತ ಸಂಭವಿಸಿದೆ. ಅಲ್ಲದೆ ಮಕ್ಕಳು ಜೀವ ರಕ್ಷಕ ಕವಚಗಳನ್ನೂ ಕೂಡ ಧರಿಸಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಿದ್ಯಾರ್ಥಿಗಳು ದಾಹನುವಿನಲ್ಲಿರುವ ಕೆಎಲ್ ಪೊಂಡಾ ಶಾಲೆಯವರಾಗಿದ್ದು, ಪಿಕ್'ನಿಂಕ್ ಗೆಂದು ಬೀಚ್'ಗೆ ಬಂದಿದ್ದರು ಎಂದು ವರದಿಗಳು ತಿಳಿಸಿವೆ.