ಮುಂಬೈ: ಆರು ದಿನಗಳ ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಅವರು ಐದನೇ ದಿನವಾದ ಗುರುವಾರ ದೇಶದ ವಾಣಿಜ್ಯ ನಗರಿ ಮುಂಬೈಗೆ ಭೇಟಿ ನೀಡಿದ್ದು, 26/11 ಉಗ್ರ ದಾಳಿಯ ಸಂತ್ರಸ್ತರಿಗೆ ಗೌರವ ಸಲ್ಲಿಸಿದರು.
ಇಸ್ರೇಲ್ ಪ್ರಧಾನಿ ನೇತಾನ್ಯಹು ಅವರು ಇಂದು ಬೆಳಗ್ಗೆ ಮುಂಬೈ ದಾಳಿ ಸಂತ್ರಸ್ತರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಬಳಿಕ ಇಸ್ರೇಲ್ ಪ್ರಧಾನಿ ಸಂದರ್ಶಕರ ಪುಸ್ತಕದಲ್ಲಿ ಸಂದೇಶ ಬರೆದರು. ಅವರಿಗೆ ಮಹರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸಾಥ್ ನೀಡಿದರು.
ನಂತರ ನೇತಾನ್ಯಹು ಅವರು ನಾರಿಮನ್ ಹೌಸ್ ಗೆ ಭೇಟಿ ನೀಡುತ್ತಿದ್ದು, ಅಲ್ಲಿ ಮುಂಬೈ ದಾಳಿಯಲ್ಲಿ ತಂದೆ ಮತ್ತು ತಾಯಿಯನ್ನು ಕಳೆದುಕೊಂಡಿದ್ದ 11 ವರ್ಷದ ಇಸ್ರೇಲ್ ಬಾಲಕ ಮೊಶೆ ಹೋಲ್ಟ್ಜ್‌ಬರ್ಗ್ ನನ್ನು ಭೇಟಿ ಮಾಡಲಿದ್ದಾರೆ.
ನವೆಂಬರ್ 26, 2008ರಲ್ಲಿ ತಾಜ್ ಹೋಟೆಲ್ ಹಾಗೂ ನಾರಿಮನ್ ಹೌಸ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೊಶೆ ತಂದೆ ಗೇವ್ರಿಯಲ್ ಮತ್ತು ತಾಯಿ ರಿವ್ಕಾ ಹೋಲ್ಟ್ಜ್‌ಬರ್ಗ್ ಸೇರಿ 166 ಮಂದಿ ಮೃತಪಟ್ಟಿದ್ದರು. ಹಾಗ ಮೊಶೆ ಎರಡು ವರ್ಷದ ಕಂದನಾಗಿದ್ದ.
ಮೊಶೆ ಒಂಬತ್ತು ವರ್ಷಗಳ ನಂತರ ಮಂಗಳವಾರ ತನ್ನ ಅಜ್ಜ, ಅಜ್ಜಿ ಹಾಗೂ ಚಿಕ್ಕಪ್ಪರೊಂದಿಗೆ ಮುಂಬೈಗೆ ಆಗಮಿಸಿದ್ದಾನೆ.