ಜಾತಿ ನಿರ್ಧಾರವಾಗುವುದು ಹುಟ್ಟಿನಿಂದ, ಮದುವೆಯಿಂದಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಜಾತಿ ನಿರ್ಧಾರವಾಗುವುದು ಹುಟ್ಟಿನಿಂದಲೇ ಹೊರತು ಮದುವೆಯಿಂದ ಅಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜಾತಿ ನಿರ್ಧಾರವಾಗುವುದು ಹುಟ್ಟಿನಿಂದಲೇ ಹೊರತು ಮದುವೆಯಿಂದ ಅಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪತಿಯ ಜಾತಿ ಪ್ರಮಾಣಪತ್ರ ನೀಡಿ ಸರ್ಕಾರಿ ಉದ್ಯೋಗ ಗಿಟ್ಟಿಸಿದ್ದ ಮಹಿಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ  ಅರುಣ್ ಮಿಶ್ರಾ ಮತ್ತು ಎಂ.ಎಂ. ಶಾಂತನಗೌಡರ್ ಅವರ ನೇತೃತ್ವದ ಪೀಠ,  ವ್ಯಕ್ತಿಯೊಬ್ಬರ ಜಾತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ಮದುವೆಯನಂತರ ವ್ಯಕ್ತಿ ಅಥವಾ ಮಹಿಳೆಯ ಜಾತಿ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 
ಪ್ರಕರಣದಲ್ಲಿ ಮಹಿಳೆಯು 21 ವರ್ಷಗಳ ಹಿಂದೆ ಮೀಸಲಾತಿ ಆಧಾರದಲ್ಲಿ ಕೇಂದ್ರೀಯ ವಿದ್ಯಾಲಯದಲ್ಲಿ ನೌಕರಿ ಪಡೆದಿದ್ದರು. ಪರಿಶಿಷ್ಠ ಜಾತಿಯ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ಮಹಿಳೆಯು ಮೀಸಲಾತಿ ಪಡೆದಿದ್ದರು. ಆದರೆ  ಮಹಿಳೆಯ ನೇಮಕಾತಿಯನ್ನು ಇದೀಗ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. "ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ನಂತರ ಮಹಿಳೆಯೀಗ ಉಪ ಪ್ರಾಂಶುಪಾಲ ಹುದ್ದೆಗೇರಿದ್ದಾರೆ. ಆಕೆ ಮೇಲ್ವರ್ಗದಲ್ಲಿ ಜನಿಸಿರುವುದರಿಂದ  ಮೀಸಲಾತಿಯ ಲಾಭಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಆಕೆ ಪರಿಶಿಷ್ಠ ಜಾತಿಯ ವ್ಯಕ್ತಿಯನ್ನು ಮದುವೆಯಾದರೂ ಜಾತಿ ಬದಲಾವಣೆಯಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದೆ.
"ಜಾತಿ ಹುಟ್ಟಿನಿಂದ ನಿರ್ಧಾರವಾಗುತ್ತದೆ ಎನ್ನುವುದರಲ್ಲಿ ಯಾವುದೇ ಬದಲಾವಣೆ ಇಲ್ಲ. ಪರಿಶಿಷ್ಟ ಜಾತಿಯವರನ್ನು ಮದುವೆಯಾಗಿದ್ದೇನೆ ಎಂದು ಜಾತಿ ಬದಲಾಯಿಸಲು ಬರುವುದಿಲ್ಲ. ಆಕೆ ಹುಟ್ಟಿದ್ದು ಅಗರ್ವಾಲ್ ಕುಟುಂಬದಲ್ಲಿ.  ಇದು ಸಾಮಾನ್ಯ ವರ್ಗದಲ್ಲಿ ಬರುತ್ತದೆ, ಪರಿಶಿಷ್ಠ ಜಾತಿಯಲ್ಲಿ ಅಲ್ಲ. ಆಕೆ ಪರಿಶಿಷ್ಠ ಜಾತಿಯವರನ್ನು ಮದುವೆಯಾಗಿದ್ದೇನೆ ಎಂಬ ಕಾರಣಕ್ಕೆ ತನ್ನ ಜಾತಿ ಪ್ರಮಾಣ ಪತ್ರದಲ್ಲಿ ಪರಿಶಿಷ್ಟ ಜಾತಿ ತೋರಿಸುವಂತಿಲ್ಲ," ಎಂದು ನ್ಯಾಯಪೀಠ  ಹೇಳಿದೆ. 
ಅಂತೆಯೇ ಮಹಿಳೆಯನ್ನು ಕೆಲಸದಿಂದ ವಜಾ ಮಾಡುವ ಬದಲು ಕಡ್ಡಾಯ ನಿವೃತ್ತಗೊಳಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com