ಸಂಗ್ರಹ ಚಿತ್ರ
ದೇಶ
ಜಮ್ಮು-ಕಾಶ್ಮೀರ; ಸರ್ಕಾರ ರಚನೆಗೆ ಪಿಡಿಪಿ ಜೊತೆಗೆ ಮೈತ್ರಿ; ವರದಿ ತಿರಸ್ಕರಿಸಿದ ಕಾಂಗ್ರೆಸ್
ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡಲು ಪಿಡಿಪಿ ಸೇರಿ ಯಾವುದೇ ಪಕ್ಷದೊಂದಿಗೂ ಕೈಜೋಡಿಸುತ್ತಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟ...
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡಲು ಪಿಡಿಪಿ ಸೇರಿ ಯಾವುದೇ ಪಕ್ಷದೊಂದಿಗೂ ಕೈಜೋಡಿಸುತ್ತಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
ಈ ಕುರಿತೆತ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಾಂಗ್ರೆಸ್ ಮುಖ್ಯಸ್ಥ ಜಿಎ ಮಿರ್ ಅವರು, ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ಯತ್ನ ನಡೆಸುತ್ತಿಲ್ಲ. ಪಿಡಿಪಿ ಸೇರಿ ಯಾವುದೇ ಪಕ್ಷದೊಂದಿಗೆ ಮೈತ್ರಿಗೆ ಮುಂದಾಗಿಲ್ಲ. ನಮ್ಮ ಪಕ್ಷ ಯಾರಿಗೂ ಬೆಂಬಲ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
2014ರ ವಿಧಾನಸಭೆ ಬಳಿಕ ಕಾಂಗ್ರೆಸ್ ಮುಫ್ತಿಯವರಿಗೆ ಬೇಷರತ್ ಬೆಂಬಲವನ್ನು ನೀಡಿತ್ತು. ಆದರೆ, ಪಿಡಿಪಿ ಒಪ್ಪಿರಲಿಲ್ಲ. ಬಳಿಕ ಹೊರಗಿನಿಂದಲೇ ನಿಮಗೆ ಬೆಂಬಲ ನೀಡುತ್ತೇವೆ, ಮೈತ್ರಿ ಸರ್ಕಾರ 6 ವರ್ಷ ಪೂರ್ಣಗೊಳಿಸಲಿ ಎಂದು ತಿಳಿಸಿದ್ದೇವೆ.
ನಮ್ಮ ಬೆಂಬಲವನ್ನು ತಿರಸ್ಕರಿಸಿದ್ದ ಪಿಡಿಪಿ ಬಿಜೆಪಿ ಮತ್ತು ಮೋದಿಗೆ ಬೆಂಬಲ ವ್ಯಕ್ತಪಡಿಸಿತ್ತು. ಬಳಿಕ ಮೈತ್ರಿ ಸರ್ಕಾರ ರಾಜ್ಯವನ್ನು ದುರಂತಕ್ಕೆ ಸಿಲುಕುವಂತೆ ಮಾಡಿದೆ. ಸರ್ಕಾರ ರಚನೆ ಮಾಡುವ ಯಾವುದೇ ಯತ್ನಗಳು ಸಮರ್ಥನೀಯವಲ್ಲ. ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ಯಾವುದೇ ಪಕ್ಷಕ್ಕೂ ಬೆಂಬಲ ನೀಡುತ್ತಿಲ್ಲ, ಮೈತ್ರಿ ಮಾಡಿಕೊಳ್ಳಲು ಯತ್ನ ನಡೆಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮೆಹಬೂಬಾ ಮುಫ್ತಿಯವರು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರನ್ನು ರಾಜಧಾನಿ ದೆಹಲಿಯಲ್ಲಿ ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದರು ಎಂಬ ವರದಿಗಳನ್ನು ತಳ್ಳಿಹಾಕಿರುವ ಅವರು, ಗುಲಾಂ ನಬಿ ಆಜಾದ್ ಅವರು ಪ್ರಸ್ತುತ ವಿದೇಶದಲ್ಲಿದ್ದಾರೆ. ಇಂತಹ ವರದಿಗಳಲ್ಲಿ ಯಾವುದೇ ಹುರುಳಿಲ್ಲ. ಆಜಾದ್ ಅವರು ಭಾನುವಾರ ರಾತ್ರಿ ಮತ್ತೆ ಭಾರತಕ್ಕೆ ಮರಳಲಿದ್ದಾರೆಂದಿದ್ದಾರೆ.
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಕಾಶ್ಮೀರದ ನೀತಿ ಯೋಜನಾ ತಂಡವನ್ನು ಸೋಮವಾರ ಭೇಟಿ ಮಾಡಲಾಗುತ್ತದೆ. ಭೇಟಿ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿ ಕುರಿತಂತೆ ಮಾತುಕತೆ ನಡೆಸಲಾಗುತ್ತದೆ.
ಜು.3 ರಂದು ಪಕ್ಷದ ಹಿರಿಯ ನಾಯಕರು, ಶಾಸಕರು, ಮಾಜಿ ಶಾಸಕರು ಹಾಗೂ ಎಂಎಲ್ಎಗಳು ಶ್ರೀನಗರದಲ್ಲಿ ಸಭೆ ನಡೆಸಲಿದ್ದು, ಈ ವೇಳೆ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಅವಧಿ ಪೂರ್ವ ಚುನಾವಣೆಗೆ ಕಾಂಗೆಸ್ ಬೆಂಬಲ ವ್ಯಕ್ತಪಡಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಪರಿಸ್ಥಿತಿಗೆ ಅನುಗುಣವಾಗಿ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದ ಬಳಿಕ ಚುನಾವಣೆ ನಡೆಯಬೇಕು. ಚುನಾವಣೆ ನಡೆಯುವುದು, ನಡೆಯದಿರುವುದು ರಾಜ್ಯಪಾಲ ವೊಹ್ರಾ ಅವರ ಮೇಲೆ ನಿಂತಿದೆ. ಚುನಾವಣೆ ನಡೆಸಬೇಕೆಂದು ಅವರು ಬಯಸಿದ್ದೇ ಆದರೆ, ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ