ಜೈಪುರ: ರಾಜಸ್ಥಾನ ಸರ್ಕಾರ ಗುಜ್ಜರ್ ಸಮುದಾಯಕ್ಕೆ ಭರ್ಜರಿ ಚುನಾವಣಾ ಗಿಫ್ಟ್ ನೀಡಿದ್ದು, ಗುಜ್ಜರ್ ಸೇರಿದಂತೆ ಅತ್ಯಂತ ಹಿಂದೂಳಿದ ವರ್ಗ(ಎಂಬಿಸಿ)ದಲ್ಲಿ ಬರುವ ಐದು ಜಾತಿಗಳಿಗೆ ಒಬಿಸಿ ಕೋಟಾದಡಿ ಶೇ.21ರಷ್ಟು ಮೀಸಲಾತಿ ನೀಡುವುದಾಗಿ ಸೋಮವಾರ ಸ್ಪಷ್ಟಪಡಿಸಿದೆ.
ಈ ಸಂಬಂಧ ಜುಲೈ 1ರಂದು ರಾಜಸ್ಥಾನ ಸಿಬ್ಬಂದಿ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಅತ್ಯಂತ ಹಿಂದೂಳಿದ ವರ್ಗದ ಅಭ್ಯರ್ಥಿಗಳು ಸಹ ಒಬಿಸಿ ಕೋಟಾದಡಿ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ.21ರಷ್ಟು ಮೀಸಲಾತಿ ಪಡೆಯಲು ಅರ್ಹರಾಗಿದ್ದಾರೆ ಎಂದು ತಿಳಿಸಿದೆ.
ಅತ್ಯಂತ ಹಿಂದೂಳಿದ ವರ್ಗದಲ್ಲಿ ಬರುವ ಗುಜ್ಜರ್, ಬಂಜಾರ ಅಥವಾ ಬಲ್ದಿಯಾ, ಗಡಿಯಾ/ಲೋಹರ್, ರೈಕಾ ಮತ್ತು ಗಡಾರಿಯಾ ಜಾತಿ ಅಭ್ಯರ್ಥಿಗಳು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗದಿದ್ದರೆ ಒಬಿಸಿ ಅಡಿ ಶೇ.21ರಷ್ಟು ಹಾಗೂ ಅತ್ಯಂತ ಹಿಂದೂಳಿದ ಕೋಟಾದ ಶೇ.1ರಷ್ಟು ಮೀಸಲಾತಿಗೆ ಪರಿಗಣಿಸಬೇಕು ಎಂದು ಆದೇಶಿಸಲಾಗಿದೆ.
ರಾಜ್ಯ ಸರ್ಕಾರ ಡಿಸೆಂಬರ್ 21, 2017ರಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಉದ್ಯೋಗದಲ್ಲಿ ಅತ್ಯಂತ ಹಿಂದೂಳಿದ ವರ್ಗಗಳಿಗೆ ಶೇ.1ರಷ್ಟು ಮೀಸಲಾತಿಗೆ ಆದೇಶಿಸಿತ್ತು.