ತಿರುಮಲನಿಗೇ ಸಂಕಷ್ಟ ತಂದಿದ್ದ ವಿದೇಶಿ ನಾಣ್ಯಗಳಿಗೆ ಅನಿವಾಸಿ ಭಾರತೀಯರಿಂದ 'ಮುಕ್ತಿ'!

ವಿಶ್ವ ವಿಖ್ಯಾತ ಮತ್ತು ದೇಶದ ಅತ್ಯಂತ ಶ್ರೀಮಂತ ದೇಗಲ, ಕಲಿಯುಗದ ವೈಕುಂಠ ಎಂದೇ ಖ್ಯಾತಿ ಪಡೆದಿರುವ ತಿರುಪತಿ ತಿರುಮಲ ದೇಗುಲಕ್ಕೆ ಸಮಸ್ಯೆ ತಂದೊಡ್ಡಿದ್ದ ವಿದೇಶಿ ನಾಣ್ಯಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ತಿರುಪತಿ: ವಿಶ್ವ ವಿಖ್ಯಾತ ಮತ್ತು ದೇಶದ ಅತ್ಯಂತ ಶ್ರೀಮಂತ ದೇಗಲ, ಕಲಿಯುಗದ ವೈಕುಂಠ ಎಂದೇ ಖ್ಯಾತಿ ಪಡೆದಿರುವ ತಿರುಪತಿ ತಿರುಮಲ ದೇಗುಲಕ್ಕೆ ಸಮಸ್ಯೆ ತಂದೊಡ್ಡಿದ್ದ ವಿದೇಶಿ ನಾಣ್ಯಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.
ಆಂಧ್ರಪ್ರದೇಶದ ತಿರುಮಲ ತಿರುಪತಿ ವೆಂಕಟರಮಣ ದೇವಸ್ಥಾನದಲ್ಲಿ ಭಕ್ತಾದಿಗಳು ಕಾಣಿಕೆ ರೂಪದಲ್ಲಿ ಅರ್ಪಿಸಿರುವ ಅಪಾರ ಪ್ರಮಾಣ ವಿದೇಶಿ ನಾಣ್ಯಗಳ ವಿಲೇವಾರಿ ಸಮಸ್ಯೆಗೆ ಕಡೆಗೂ ಪರಿಹಾರ ದೊರಕಿದೆ. ಆಂಧ್ರ ಸರ್ಕಾರದ ಸಹಾಯ ಪಡೆದಿರುವ ತೆಲುಗು ಅನಿವಾಸಿ ಭಾರತೀಯರ ಸಂಘಟನೆ 'ಎಪಿ ಅನಿವಾಸಿ ತೆಲುಗು ಸಂಘ(ಎಪಿಎನ್‌ಆರ್‌ಟಿಎಸ್)' ಇದೀಗ ವೆಂಕಟರಮಣ ದೇವಸ್ಥಾನದಲ್ಲಿ ಸಂಗ್ರಹಗೊಂಡಿರುವ ನಾಣ್ಯಗಳ ನೈಜ ವೆಚ್ಚವನ್ನು ಪಾವತಿಸಿ ಖರೀದಿಸಲು ಮುಂದಾಗಿದೆ.
ವಿದೇಶದ ಕರೆನ್ಸಿ ನೋಟುಗಳನ್ನು ಆರ್‌ ಬಿಐಗೆ ಸಲ್ಲಿಸಿ ಭಾರತೀಯ ರೂಪಾಯಿಗೆ ವಿನಿಮಯ ಮಾಡಿಕೊಳ್ಳಬಹುದು. ಆದರೆ ವಿದೇಶಿ ನಾಣ್ಯಗಳ ಮುಖಬೆಲೆ ಕಡಿಮೆಯಾಗಿರುವ ಕಾರಣ ಇವನ್ನು ವಿನಿಮಯ ಮಾಡಿಕೊಳ್ಳಲು ಸಮಸ್ಯೆಯಾಗಿತ್ತು. ಈ ಬಗ್ಗೆ ಆರ್‌ ಬಿಐ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ ಎಂದು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಮ್ಸ್)ಯ ಅಧಿಕಾರಿಗಳು ತಿಳಿಸಿದ್ದಾರೆ. 
ಮೂಲಗಳ ಪ್ರಕಾರ ಅನಿವಾಸಿ ಭಾರತೀಯರು ಮತ್ತು ವಿದೇಶಿ ಭಕ್ತರು ಸಲ್ಲಿಕೆ ಮಾಡಿರುವ ವಿದೇಶಿ ನಾಣ್ಯಗಳ ತೂಕವೇ ಸುಮಾರು 10 ಟನ್ ಗೂ ಅಧಿಕವಿದೆ ಎಂದು ಹೇಳಲಾಗುತ್ತಿದೆ. ಹೀಗೆ ರಾಶಿ ಬಿದ್ದಿರುವ ವಿದೇಶಿ ನಾಣ್ಯಗಳನ್ನು ವಿಲೇವಾರಿ ಮಾಡಲು ಬೇರೆ ದಾರಿ ಕಾಣದೆ ಈ ನಾಣ್ಯಗಳನ್ನು ಅವುಗಳ ಮೂಲ ದೇಶಗಳಿಗೆ ಮರಳಿಸುವ ಬಗ್ಗೆಯೂ ಟಿಟಿಡಿ ಅಧಿಕಾರಿಗಳು ಚಿಂತನೆ ನಡೆಸಿದ್ದರು. ಆದರೆ ನಾಣ್ಯಗಳ ಬೆಲೆಗಿಂತ ಸಾಗಾಟ ದರ ಅಧಿಕವಾಗುವ ಕಾರಣ ಈ ಯೋಜನೆ ಕೈಬಿಡಲಾಗಿದೆ.
ನಾಣ್ಯಗಳ ವಿಲೇವಾರಿಗೆ ಟಿಟಿಡಿ ಮಾಸ್ಚರ್ ಪ್ಲಾನ್, ಏಳು ಬೆಟ್ಟಗಳಿಂದ ಏಳು ದೇಶಗಳಿಗೆ ಯೋಜನೆ
ದೇವಸ್ಥಾನದಲ್ಲಿ ಸಂಗ್ರಹವಾಗಿರುವ ವಿದೇಶಿ ನಾಣ್ಯಗಳ ಬೆಲೆ ಸುಮಾರು ಒಂದೂವರೆ ಕೋಟಿ ರೂ.ಆಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದ ಕಾಣಿಕೆ ಹುಂಡಿಯಿಂದ ಬಂದಿರುವ ನಾಣ್ಯ ಪವಿತ್ರ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ 'ಏಳು ಬೆಟ್ಟಗಳಿಂದ ಏಳು ದೇಶಗಳಿಗೆ' ಎಂಬ ಪರಿಕಲ್ಪನೆಯಡಿ ಏಳು ಬೆಟ್ಟಗಳ ಒಡೆಯನೆಂಬ ಪ್ರತೀತಿಯ ವೆಂಕಟರಮಣ ದೇವಸ್ಥಾನದಿಂದ ಪಡೆದ ನಾಣ್ಯಗಳನ್ನು ದೇವಸ್ಥಾನದ ಪವಿತ್ರ ಬಟ್ಟೆಯಿಂದ ತಯಾರಿಸಲಾದ ಸಣ್ಣ ಚೀಲದಲ್ಲಿ 20 ಅಮೆರಿಕನ್ ಡಾಲರ್ ಮೊತ್ತಕ್ಕೆ ಸಮಾನವಾದ ನಾಣ್ಯಗಳನ್ನು ತುಂಬಿ, ವಿಶ್ವದಾದ್ಯಂತದ ಆಸಕ್ತರಿಗೆ ಕೊರಿಯರ್ ಮೂಲಕ ತಲುಪಿಸಲಾಗುತ್ತದೆ ಎಂದು ಎಪಿಎನ್‌ಆರ್‌ಟಿ ಅಧ್ಯಕ್ಷ ರವಿಕುಮಾರ್ ವೇಮುರಿ ತಿಳಿಸಿದ್ದಾರೆ. 
ಸಾಗಣೆ ವೆಚ್ಚ ಸೇರಿದಂತೆ ಪ್ರತೀ ಚೀಲಕ್ಕೆ 2,000 ರೂ. ದರ ವಿಧಿಸಲಾಗುತ್ತದೆ. ಎಪಿಎನ್‌ಆರ್‌ಟಿ ಸೊಸೈಟಿಯಲ್ಲಿ 111 ದೇಶದ 85,000 ಸದಸ್ಯರಿದ್ದಾರೆ. ನಮ್ಮ ಯೋಜನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೇವಸ್ಥಾನದಲ್ಲಿ ಸಂಗ್ರಹವಾಗಿರುವ ವಿದೇಶಿ ನಾಣ್ಯಗಳಲ್ಲಿ ಅಮೆರಿಕ ಮತ್ತು ಬ್ರಿಟನ್‌ನ ನಾಣ್ಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲದೆ ಸುಮಾರು 8 ಟನ್‌ಗಳಷ್ಟು ಮಲೇಷ್ಯಾದ ನಾಣ್ಯಗಳಿದ್ದು ಇವನ್ನು ತಮಿಳುನಾಡಿನ ಭಕ್ತರಿಗೆ ಹರಾಜು ಮೂಲಕ ಹಂಚಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com