ಅವಿಶ್ವಾಸ ಮಂಡನೆ: ಸಾಕಾಗಿದೆ, ನಿರ್ಣಾಯಕ ಅಧಿವೇಶನದಲ್ಲಿ ಪಾಲ್ಗೊಳ್ಳಲ್ಲ- ಟಿಡಿಪಿ ಸಂಸದ
ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೆಲುಗು ದೇಶಂ ಪಕ್ಷ (ಟಿಡಿಪಿ) ಮಂಡನೆ ಮಾಡಿರುವ ಅವಿಶ್ವಾಸ ನಿರ್ಣಯ ಕುರಿತು ಇನ್ನು ಕೆಲವೇ ದಿನಗಳಲ್ಲಿ ಚರ್ಚೆ ನಡೆಯಲಿದ್ದು, ಈ ನಿರ್ಣಾಯ ಅಧಿವೇಶನದಲ್ಲಿ...
ನವದೆಹಲಿ: ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೆಲುಗು ದೇಶಂ ಪಕ್ಷ (ಟಿಡಿಪಿ) ಮಂಡನೆ ಮಾಡಿರುವ ಅವಿಶ್ವಾಸ ನಿರ್ಣಯ ಕುರಿತು ಇನ್ನು ಕೆಲವೇ ದಿನಗಳಲ್ಲಿ ಚರ್ಚೆ ನಡೆಯಲಿದ್ದು, ಈ ನಿರ್ಣಾಯಕ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಟಿಡಿಪಿ ಸಂಸದರೊಬ್ಬರು ಗುರುವಾರ ಹೇಳಿದ್ದಾರೆ.
ಅವಿಶ್ವಾಸ ನಿರ್ಣಯ ಮಂಡನೆಯನ್ನು ಪರಿಗಣಿಸಿರುವ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಲೋಕಸಭೆಯಲ್ಲಿ ಜು.20 ಮತ್ತು ರಾಜ್ಯಸಭೆಯಲ್ಲಿ ಜು.23 ರಂದು ಚರ್ಚೆಗೆ ಅವಕಾಶ ನೀಡಿದ್ದರು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಟಿಡಿಪಿ ಸಂಸದ ಜೆಸಿ ದಿವಾಕರ್ ರೆಡ್ಡಿಯವರು, ಟಿಡಿಪಿ ಪಕ್ಷ ಹಾಗೂ ಕೇಂದ್ರದ ನಡುವಿನ ತಿಕ್ಕಾಟಗಳಿಂದ ಸಾಕಾಗಿ ಹೋಗಿದ್ದು, ಈ ನಿರ್ಣಾಯಕ ಅಧಿವೇಶನದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಸಂಸತ್ತು ಅಧಿವೇಶನಕ್ಕೆ ನಾನು ಹೋಗುವುದಿಲ್ಲ. ಪಕ್ಷದ ವಿಪ್ ಸೂಚನೆಗಳನ್ನು ನಾನು ಉಲ್ಲಂಘನೆ ಮಾಡಿದ್ದೇನೆಂದು ಹೇಳಬಹುದು. ಕೇಂದ್ರ ಹಾಗೂ ಟಿಡಿಪಿ ಸರ್ಕಾರಗಳ ಹಗ್ಗಜಗ್ಗಾಟದಿಂದ ಸಾಕಾಗಿ ಹೋಗಿದೆ. ರಾಜಕೀಯ ವ್ಯವಸ್ಥೆಯೇ ಸಾಕಾಗಿ ಹೋಗಿದೆ. ಪ್ರಸ್ತುತ ನಾನು ನನ್ನ ಹುಟ್ಟೂರು ಅನಂತಪುರದಲ್ಲಿದ್ದೇನೆ. ಇನ್ನೊಂದು ವಾರದಲ್ಲಿ ತಾರ್ಕಿಕ ಅಭಿಪ್ರಾಯದೊಂದಿಗೆ ಮಾಧ್ಯಮಗಳ ಮುಂದೆ ಬರುತ್ತೇನೆಂದು ತಿಳಿಸಿದ್ದಾರೆ.