ಮುಂಬೈ: ಮರಾಠಾ ಸಮುದಾಯಕ್ಕೆ ಮೀಸಲು ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟವು ಮಹಾರಾಷ್ಟ್ರದಲ್ಲಿ ತೀವ್ರಗೊಂಡಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದ ಪ್ರತಿಭಟನಾಕಾರನೊಬ್ಬ ಬುಧವಾರ ಮೃತಪಟ್ಟಿದ್ದಾನೆ.
ಪ್ರತಿಭಟನೆ ವೇಳೆ ಮರಾಠ ಸಮುದಾಯದ ಸದಸ್ಯ ಜಗನ್ನಾಥ್ ಸೊನಾವ್ನೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ಇದರಂತೆ ಔರಂಗಾಬಾದ್ ಜಿಲ್ಲೆಯಲ್ಲೂ ಮತ್ತೊಬ್ಬ ಪ್ರತಿಭಟನಾಕಾರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿತ್ತು. ಇದೀಗ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಈ ಘಟನೆಗಳಿಂದ ಮಹಾರಾಷ್ಟ್ರದ ಹಲವೆಡೆ ತ್ವೇಷಮಯ ವಾತಾವರಣ ನಿರ್ಮಾಣವಾಗಿದ್ದು, ಮಹಾರಾಷ್ಟ್ರದಲ್ಲಿಂದು ಬಂದ್ ಆಚರಿಸಲಾಗುತ್ತಿದೆ.
ಈ ನಡುವೆ ಮರಾಠ ಸಮುದಾಯದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ ಓರ್ವ ಪೇದೆ ಸಾವನ್ನಪ್ಪಿ, ಇತರೆ 13 ಮಂದಿ ಪೇದೆಗಳು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಮೀಸಲು ಒದಗಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಬೇಕು ಹಾಗೂ ಮರಾಠ ಸಮುದಾಯದಲ್ಲಿ ಕ್ಷಮೆಯಾಚಿಸಬೇಕೆಂದು ಮರಾಠಾ ಮೀಸಲು ಹೋರಾಟ ಸಮಿತಿ ಮುಖಂಡ ರವೀಂದ್ರ ಪಾಟೀಲ್ ಆಗ್ರಹಿಸಿದ್ದಾರೆ.
ಬಂದ್ ಹಿನ್ನೆಲೆ ರಾಜ್ಯದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಶಾಲಾ-ಕಾಲೇಜುಗಳಿಗೆ ಆಯಾ ಸ್ಥಳೀಯ ಪರಿಸ್ಥಿತಿಗಳಿಗೆ ಅನುಸರಿಸಿ ರಜೆ ನೀಡುವಂತೆ ಸರ್ಕಾರ ಜಿಲ್ಲಾಡಳಿಗಳಿಗೆ ಸೂಚನೆ ನೀಡಿದೆ.
ಇದೇ ಕಾರಣಕ್ಕಾಗಿ ಮುಖ್ಯಮಂತ್ರಿ ಫಡ್ನವೀಸ್ ಅವರು ಆಷಾಢ ಏಕಾದಶಿ ದಿನವಾದ ಸೋಮವಾರ ಪಂಢರಪುರ ವಿಠ್ಠಲನ ದರ್ಶನ ರದ್ದುಗೊಳಿಸಿದ್ದರು.