ವಾಷಿಂಗ್ಟನ್, ಮಾಸ್ಕೋ ಮಾದರಿಯಲ್ಲೇ ದೆಹಲಿಗೂ ಕ್ಷಿಪಣಿ 'ರಕ್ಷಾ ಕವಚ'

ಅಮೆರಿಕ ರಾಜಧಾನಿ ವಾಷಿಂಗ್ಟನ್, ರಷ್ಯಾ ರಾಜಧಾನಿ ಮಾಸ್ಕೋ ದಂತೆಯೇ ರಾಷ್ಟ್ರ ರಾಜಧಾನಿ ದೆಹಲಿಗೂ ಕ್ಷಿಪಣಿ ರಕ್ಷಾ ಕವಚ ಅಳವಡಿಸಲು ಕೇಂದ್ರ ಸರ್ಕಾರದ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಅಮೆರಿಕ ರಾಜಧಾನಿ ವಾಷಿಂಗ್ಟನ್, ರಷ್ಯಾ ರಾಜಧಾನಿ ಮಾಸ್ಕೋ ದಂತೆಯೇ ರಾಷ್ಟ್ರ ರಾಜಧಾನಿ ದೆಹಲಿಗೂ ಕ್ಷಿಪಣಿ ರಕ್ಷಾ ಕವಚ ಅಳವಡಿಸಲು ಕೇಂದ್ರ ಸರ್ಕಾರದ ಮುಂದಾಗಿದೆ.
ದೆಹಲಿ ಸುತ್ತಮುತ್ತಲ ಪ್ರಮುಖ ಪ್ರದೇಶಗಳಲ್ಲಿ ಕ್ಷಿಪಣಿ ಸಹಿತ ಭದ್ರತಾ ಕೋಟೆಯನ್ನು ನಿರ್ಮಿಸಲು ಚಿಂತಿಸಲಾಗುತ್ತಿದ್ದು, 9/11 ರೀತಿಯ ಯಾವುದೇ ವೈಮಾನಿಕ, ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದ ದೆಹಲಿಯನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 
ಮೂಲಗಳ ಪ್ರಕಾರ ಇದಕ್ಕಾಗಿ ದೆಹಲಿಯ ಪ್ರಮುಖ ಪ್ರದೇಶಗಳೂ ಸೇರಿದಂತೆ ದೆಹಲಿ ಹೊರಭಾಗದ ಪ್ರಮುಖ ಪ್ರದೇಶಗಳಲ್ಲಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲು ಚಿಂತಿಸಲಾಗುತ್ತಿದೆ.  ಹಳತಾದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬದಲಿಸುವುದು, ವಿಐಪಿ ಪ್ರದೇಶದ ಮೇಲೆ ವಿಮಾನ ಹಾರಾಟ ನಿರ್ಬಂಧವನ್ನು ಮತ್ತಷ್ಟು ಬಿಗುಗೊಳಿಸುವುದು ಅಲ್ಲದೇ  ಅನುಮಾನಾಸ್ಪದ ವಿಮಾನಗಳನ್ನು ಹೊಡೆದುರುಳಿಸುವಂತೆ ನಿಯಮದಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು ಸೇರಿದಂತೆ ಅನೇಕ ಕ್ರಮಗಳನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ  ರಕ್ಷಣಾ ಸ್ವಾಧೀನ ಸಮಿತಿಯು ಒಪ್ಪಿಗೆ ನೀಡಿದ್ದು, ಅಮೆರಿಕದೊಂದಿಗೆ ಸುಮಾರು 1 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದಕ್ಕೆ ಒಪ್ಪಿಗೆ ನೀಡಲಾಗಿದೆ. ಅದರಂತೆ ಅಮೆರಿಕದಿಂದ ಭೂಮಿಯಿಂದ ವಾಯುಗುರಿಗಳನ್ನು ಛಿದ್ರ ಮಾಡಬಲ್ಲ ಸುಧಾರಿತ ನಾಸಾಮ್ಸ್-2 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿ ಮಾಡಲು ನಿರ್ಧರಿಸಲಾಗಿದೆ. 
ದೆಹಲಿ ಪ್ರಾದೇಶಿಕ ವಾಯು ರಕ್ಷಣಾ ವ್ಯವಸ್ಥೆಯಡಿ, ಈಗಾಗಲೇ ಭದ್ರತಾ ವ್ಯವಸ್ಥೆಯಲ್ಲಿರುವ ವಿಐಪಿ-89 ಪ್ರದೇಶವನ್ನೂ ಒಳಗೊಳ್ಳುವ ಮೂಲಕ ರಾಷ್ಟ್ರಪತಿ ಭವನ, ಸಂಸತ್‌ ಭವನ, ರೈಸಿನಾ ಹಿಲ್ಸ್, ಅನ್ನೂ ಒಳಗೊಂಡಂತೆ ಪ್ರಮುಖ ಪ್ರದೇಶಗಳಲ್ಲಿ ಈ ಕ್ಷಿಪಣಿ ವ್ಯವಸ್ಥೆಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಅಂತೆಯೇ ಯಾವುದೇ ರೀತಿಯ ವಿಧ್ವಂಸದ ಸುಳಿವು ಸಿಕ್ಕರೂ ಅದನ್ನು ಅಲ್ಲೇ ಹೊಡೆದುರುಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ದೆಹಲಿಗೂ ಮೊದಲೇ ಇಂತಹ ವ್ಯವಸ್ಥೆಯನ್ನು ಅಮೆರಿಕದ ವಾಷಿಂಗ್ಟನ್, ರಷ್ಯಾದ ಮಾಸ್ಕೋ ನಗರಗಳಲ್ಲಿ ಅಳವಡಿಸಲಾಗಿದೆ. ಇದಲ್ಲದೆ ಇಸ್ರೇಲ್, ಯೂರೋಪ್ ನ ಕೆಳ ಪ್ರಮುಖ ನಗರಗಳಲ್ಲೂ ಇಂತಹ ವ್ಯವಸ್ಥೆ ಅಳವಡಿಸಲಾಗಿದೆ. 
ಇದಲ್ಲದೆ  ರಾಜಧಾನಿ ದೆಹಲಿ ಹಾಗೂ ವಾಣಿಜ್ಯ ರಾಜಧಾನಿ ಮುಂಬೈ ನಂತಹ ನಗರಗಳ ರಕ್ಷಣೆಗೆಂದೇ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ರಕ್ಷಣಾ ಅಭಿವೃದ್ಧಿ ಸಂಶೋಧನಾ ಸಂಸ್ಥೆ(ಡಿಆರ್‌ಡಿಓ) ಅಭಿವೃದ್ಧಿಪಡಿಸುತ್ತಿದೆ. ಒಮ್ಮೆ ಈ ಅಭಿವೃದ್ಧಿ ಫಲಿಸಿದಲ್ಲಿ, 2000 ಕಿಮೀಗಂತಲೂ ಹೆಚ್ಚು ದೂರದಿಂದ ತೂರಿಬರುವ ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳಿಂದ ನಮ್ಮ ನಗರಗಳನ್ನು ರಕ್ಷಿಸಿಕೊಳ್ಳಬಹುದಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com