ಕೇಂದ್ರ ಸರ್ಕಾರ ರಚಿಸಿರುವ ಕಾವೇರಿ ಸ್ಕೀಂ ಕರಡಿನ ಮುಖ್ಯಾಂಶಗಳೇನು..?

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಫೆಬ್ರವರಿ 16 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಅನ್ವಯ ಕೇಂದ್ರ ಸರ್ಕಾರ ಕೊನೆಗೂ ಕಾವೇರಿ ಕರಡು ಸ್ಕೀಂ ರಚನೆ ಮಾಡಿದ್ದು, ಅಧ್ಯಕ್ಷ ಮತ್ತು 8 ಮಂದಿ ಸದಸ್ಯರ ಕಾವೇರಿ ನಿರ್ವಹಣಾ ಸಮಿತಿ ರಚನೆ ಮಾಡಿ ಗೆಜೆಟ್ ನಲ್ಲಿ ಪ್ರಕಟಿಸಲು ನಿರ್ದೇಶನ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಫೆಬ್ರವರಿ 16 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಅನ್ವಯ ಕೇಂದ್ರ ಸರ್ಕಾರ ಕೊನೆಗೂ ಕಾವೇರಿ ಕರಡು ಸ್ಕೀಂ ರಚನೆ ಮಾಡಿದ್ದು, ಅಧ್ಯಕ್ಷ ಮತ್ತು 8 ಮಂದಿ ಸದಸ್ಯರ ಕಾವೇರಿ ನಿರ್ವಹಣಾ ಸಮಿತಿ ರಚನೆ ಮಾಡಿ ಗೆಜೆಟ್ ನಲ್ಲಿ ಪ್ರಕಟಿಸಲು ನಿರ್ದೇಶನ ನೀಡಿದೆ.
ಇಷ್ಟಕ್ಕೂ ಏನಿದು ಈ ಕಾವೇರಿ ಸ್ಕೀಂ?
ಕಾವೇರಿ ನ್ಯಾಯಮಂಡಳಿ ಆದೇಶ ಮಾರ್ಪಡಿಸಿ ತೀರ್ಪಿನ ಅನ್ವಯ ಪ್ರಾಧಿಕಾರದ ಸ್ವರೂಪದ ಸ್ಕೀಂ ರಚನೆ ಮಾಡಲಾಗಿದೆ. ಈ ಪ್ರಾಧಿಕಾರವು ಕಾವೇರಿ ನೀರಿನ ಸಂಗ್ರಹ, ಹಂಚಿಕೆ ಮತ್ತು ನಿಯಂತ್ರಣ ಕುರಿತು ಗಮನಹರಿಸಲಿದೆ. ಜಲಾಶಯಗಳ ಮೇಲುಸ್ತುವಾರಿ ಹಾಗೂ ನೀರು ಬಿಡುಗಡೆಗೆ ಸಮಿತಿಯ ಸಹಕಾರ ಪಡೆಯಲಿದೆ. ಬಿಳಿಗುಂಡ್ಲು ಮಾಪಕ ಕೇಂದ್ರದ ಮೂಲಕ ನೀರಿನ ಅಳತೆ ಮಾಡುವ ಜವಾಬ್ದಾರಿ ಕೂಡ ಪ್ರಾಧಿಕಾರದ್ದಾಗಿರುತ್ತದೆ. ಪ್ರಾಧಿಕಾರ ತನ್ನ ಸಹಾಯಕ್ಕಾಗಿ ಒಂದು ಅಥವಾ ಎರಡು ಸಮಿತಿ ನೇಮಿಸಿಕೊಳ್ಳುವ ಅಧಿಕಾರ ಹೊಂದಿರುತ್ತದೆ. ನೀರಿನ ಒಳಹರಿವು, ಸಂಗ್ರಹ, ಬಳಕೆ ಮತ್ತು ಬಿಡುಗಡೆ ಕುರಿತಂತೆ ಪ್ರಾಧಿಕಾರವು 10 ದಿನಕ್ಕೊಮ್ಮೆ ಪರಿಶೀಲಿಸಿ, ಸಂಬಂಧಿಸಿದ ರಾಜ್ಯಗಳಿಗೆ ನಿಯಮಿತವಾಗಿ ನೀರನ್ನು ಪಡೆಯಲು ಅವಕಾಶ ನೀಡಲಿದೆ. ಹಂಚಿಕೆಯಾದ ನೀರನ್ನು ಸಂಬಂಧಿಸಿದ ರಾಜ್ಯಗಳಿಗೆ ಕೊಡಿಸಲು ಪ್ರಾಧಿಕಾರವು ಪ್ರಯತ್ನಿಸಲಿದೆ. ಮಳೆ ಕೊರತೆಯನ್ನು ಪರಿಶೀಲಿಸಿ ಅರಿಯಲಿರುವ ಪ್ರಾಧಿಕಾರವು ಕೊರತೆಗೆ ಅನುಗುಣವಾಗಿಯೇ ನೀರು ಹಂಚಲಿದೆ.
ಮಾಹಿತಿ ಹಂಚಿಕೆ
ಪ್ರಮುಖವಾಗಿ ಆಯಾ ರಾಜ್ಯಗಳ ಬೆಳೆಯ ಪ್ರಮಾಣ, ಬೆಳೆ ಪದ್ಧತಿ, ನೀರಾವರಿ ಅವಲಂಬನೆ ಅರಿತು ಮತ್ತು ಕುಡಿಯುವ ನೀರು ಹಾಗೂ ಕೈಗಾರಿಕೆಗೂ ಮಳೆಯ ಪ್ರಮಾಣ ಆಧರಿಸಿಯೇ ನಿರ್ಧರಿಸಲಿದೆ. ಪ್ರಾಧಿಕಾರವು ಅತ್ಯುತ್ತಮ ಸಂವಹನ ಜಾಲ ರೂಪಿಸಿ ಎಲ್ಲಾ ಅಂಕಿ ಅಂಶಗಳು ಕಾವೇರಿ ಕಣಿವೆ ವ್ಯಾಪ್ತಿಯ ನಾಲ್ಕು ರಾಜ್ಯಗಳಿಗೆ ಲಭ್ಯವಾಗುವಂತೆ ಮಾಡಲಿದೆ. ಇದಕ್ಕಾಗಿ ಕೇಂದ್ರ ಜಲ ಆಯೋಗ ಮತ್ತು ಕೇಂದ್ರ-ರಾಜ್ಯ ಸರ್ಕಾರದ ಸಂಬಂಧಿಸಿದ ಇಲಾಖೆಗಳ ನೆರವು ಪಡೆಯಲಿದೆ.
ರಾಜ್ಯಗಳ ಬೇಡಿಕೆ ಪಟ್ಟಿ ಕಡ್ಡಾಯ
ಕಣಿವೆ ವ್ಯಾಪ್ತಿಯ ರಾಜ್ಯಗಳು ಆಯಾ ವರ್ಷದ ಬೇಡಿಕೆ ಪಟ್ಟಿಯನ್ನು ಜಲವರ್ಷದ ಆರಂಭದಲ್ಲೇ ಪ್ರಾಧಿಕಾರಕ್ಕೆ ನೀಡುವುದು ಕಡ್ಡಾಯ. ಬೇರೆ ಬೇರೆ ಜಲಾನಯನ ಪ್ರದೇಶಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಸುರಿಯುವ ಮಳೆಯ ಪ್ರಮಾಣ ಆಧರಿಸಿ ಬೇಡಿಕೆ ಪಟ್ಟಿ ತಯಾರಿಸುವುದು ಕಡ್ಡಾಯವಾಗಿರುತ್ತದೆ. ಕಾವೇರಿ ಕಣಿವೆಯಲ್ಲಿ ಕೈಗೊಳ್ಳುವ ಯಾವುದೇ ಕಾಮಗಾರಿಯನ್ನು ಪರಿಶೀಲಿಸುವ ಪ್ರಾಧಿಕಾರ ಹಾಗೂ ಅದರ ಸದಸ್ಯರಿಗೆ ಇರುತ್ತದೆ. ರಾಜ್ಯಗಳು ತೀರ್ಪಿನ ಅನುಷ್ಠಾನಕ್ಕೆ ಸಮ್ಮತಿಸದಿದ್ದರೆ ಆಗ ಪ್ರಾಧಿಕಾರ ಮತ್ತೆ ಕೇಂದ್ರ ಸರ್ಕಾರದ ಮೊರೆ ಹೋಗುತ್ತದೆ. ನೀರಿನ ಸದ್ಬಳಕೆ ಮತ್ತು ಸಂಗ್ರಹ ಕುರಿತಂತೆ ಪ್ರಾಧಿಕಾರವು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುವ ಅಧಿಕಾರ ಹೊಂದಿದೆ. ಕಾವೇರಿ ಜಲ ನಿಯಂತ್ರಣ ಸಮಿತಿ ಅಗತ್ಯ ಎಂದು ಕಂಡುಬಂದಲ್ಲಿ ಅದನ್ನು ರಚಿಸುವ ಅಧಿಕಾರ ಕೂಡ ಪ್ರಾಧಿಕಾರಕ್ಕೆ ಇರುತ್ತದೆ.
ಬೆಳೆ ಪದ್ಧತಿ, ನೀರಿನ ಬಳಕೆ ಕುರಿತು ಪ್ರಾಧಾಕಾರದಿಂದಲೇ ಸಲಹೆ
ಬೆಳೆಯ ಪದ್ಧತಿಯಲ್ಲಿ ಬದಲಾವಣೆ ಹಾಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ನೀರಿನ ನಿಯಮಿತ ಬಳಕೆ ಬಗ್ಗೆ ಪ್ರಾಧಿಕಾರವು ಸಲಹೆ ನೀಡಬೇಕು. ಪ್ರಾಧಿಕಾರವು ಪ್ರತಿವರ್ಷ ಸೆಪ್ಟೆಂಬರ್ 30ರೊಳಗೆ ತನ್ನ ಕಾರ್ಯಚಟುವಟಿಕೆಯನ್ನು ಒಳಗೊಂಡ ಪಟ್ಟಿಯನ್ನು ಕಣಿವೆ ವ್ಯಾಪ್ತಿಯ ನಾಲ್ಕು ರಾಜ್ಯಗಳಿಗೆ ನೀಡಬೇಕು. ಪ್ರಾಧಿಕಾರದಲ್ಲಿ ಇರುವ ಮಾಹಿತಿಯನ್ನು ರಾಜ್ಯಗಳು ಬಯಸಿದಾಗ ಕೊಡಬೇಕು.
ವೆಚ್ಚ ಆಯಾ ರಾಜ್ಯಗಳದ್ದೇ
ನೀರಿನ ಸಂಗ್ರಹ, ಬಳಕೆ, ಬಿಡುಗಡೆ, ಮಾಪನ ಕೇಂದ್ರಗಳ ಅಳವಡಿಕೆಯ ಖರ್ಚು ವೆಚ್ಚವನ್ನು ಆಯಾ ವ್ಯಾಪ್ತಿಯ ರಾಜ್ಯಗಳೇ ಭರಿಸಬೇಕಿದೆ. ಪ್ರಾಧಿಕಾರದ ಸಭೆ ಮತ್ತು ಚಟುವಟಿಕೆಗಳ ಎಲ್ಲಾ ದಾಖಲೆಗಳು ಹಾಗೂ ಲೆಕ್ಕಪತ್ರ ಸಂಗ್ರಹಿಸಿಡಲು ಸೂಕ್ತವಾದ ಕಚೇರಿ ಸ್ಥಾಪಿಸಬೇಕು. ದಾಖಲೆಗಳು ಮತ್ತು ಮಾಪನ ದತ್ತಾಂಶಗಳು ಈ ಕಚೇರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಲಭ್ಯ ಇರಬೇಕು. ಈ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಲಿರುವ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಗಳು ನೇಮಕ ಪ್ರಕ್ರಿಯೆ ಕೇಂದ್ರ ಸರ್ಕಾರದ ನಿಯಾಮವಳಿಗಳ ಪ್ರಕಾರ ಆಗಬೇಕು ಹಾಗೂ ಪ್ರಾಧಿಕಾರದ ಕೇಂದ್ರ ಕಚೇರಿಯು ದೆಹಲಿಯಲ್ಲೇ ಇರಬೇಕು ಎಂಬ ಅಂಶಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com