ಕೋಲ್ಕತ್ತಾ: ಹೊಟ್ಟೆ ತುಂಬಾ ಚಿಕನ್ ಬಿರಿಯಾನಿ ತಿಂದು ದುಡ್ಡು ಕೊಡಿ ಅಂದಿದ್ದಕ್ಕೆ ಅಂಗಡಿ ಮಾಲೀಕನನ್ನು ಗ್ರಾಹಕರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ನಾಲ್ವರು ಗ್ರಾಹಕರು ಬಿರಿಯಾನಿ ತಿನ್ನಲ್ಲು ಹೊಟೇಲ್ ಒಂದಕ್ಕೆ ಬಂದಿದ್ದಾರೆ. ನಂತರ ನಾಲ್ವರು ಬಿರಿಯಾನಿ ತಿಂದಿದ್ದಾರೆ. ಪ್ಲೇಟ್ ಒಂದಕ್ಕೆ 190 ರುಪಾಯಿ ಕೊಡಿ ಅಂದಿದ್ದಕ್ಕೆ ಮಾಲೀಕನ ಮೇಲೆ ನಾಲ್ವರು ಜಗಳಕ್ಕೆ ನಿಂತಿದ್ದಾರೆ. ಜಗಳ ತಾರಕಕ್ಕೇರಿದ್ದು ಈ ವೇಳೆ ನಾಲ್ವರಲ್ಲಿ ಒಬ್ಬ ಗನ್ ತೆಗೆದು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಮೃತ ಅಂಗಡಿ ಮಾಲೀಕನನ್ನು ಸಂಜಯ್ ಮೊಂಡಲ್ ಎಂದು ಗುರುತಿಸಲಾಗಿದೆ. ಈ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಶಂಕಿತರ ಪೈಕಿ ಓರ್ವನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಇನ್ನುಳಿದವರಿಗಾಗಿ ಶೋಧ ನಡೆಸಿದ್ದಾರೆ.
ಮೃತ ಮೊಂಡಲ್ ಸಹೋದರ ಮೊಹಮ್ಮದ್ ಫಿರೋಜ್ ತನ್ನ ಸಹೋದರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾಗಿ ತಿಳಿಸಿದ್ದು ಈ ಸಂಬಂಧ ಫಿರೋಜ್ ನನ್ನು ಬಂಧಿಸಲಾಗಿದೆ. ಘಟನೆ ವೇಳೆ ಫಿರೋಜ್ ಜತೆ ರಾಜಾ, ಮೊಗ್ರಿ ಮತ್ತು ಸಲ್ಮಾನ್ ಇದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಿರಿಯಾನಿ ಬೆಲೆಗೆ ಸಂಬಂಧಿಸಿದಂತೆ ಈ ಪ್ರಕರಣ ನಡೆದಿದ್ದು ಈ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.