ಪ್ರಧಾನಿ ಕಚೇರಿಯಿಂದ ಆಪ್ ಸರ್ಕಾರದ ವಿರುದ್ಧ ಎಲ್'ಜಿ ಕಚೇರಿ, ಇಡಿ, ಐಟಿ ಇಲಾಖೆಗಳ ದುರ್ಬಳಕೆ: ಕೇಜ್ರಿವಾಲ್

ಆಮ್ ಆದ್ಮಿ ಸರ್ಕಾರದ ವಿರುದ್ಧ ಪ್ರಧಾನಮಂತ್ರಿಗಳ ಕಚೇರಿ ಲೆಫ್ಟಿನೆಂಟ್ ಗವರ್ನರ್ ಕಚೇರಿ, ಜಾರಿ ನಿರ್ದೇಶನಾಲಯ, ಸಿಬಿಐ, ಐಟಿ ಇಲಾಖೆ, ಪೊಲೀಸ್ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಆರೋಪ ಮಾಡಿದ್ದಾರೆ...
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ನವದೆಹಲಿ: ಆಮ್ ಆದ್ಮಿ ಸರ್ಕಾರದ ವಿರುದ್ಧ ಪ್ರಧಾನ ಮಂತ್ರಿಗಳ ಕಚೇರಿ ಲೆಫ್ಟಿನೆಂಟ್ ಗವರ್ನರ್ ಕಚೇರಿ, ಜಾರಿ ನಿರ್ದೇಶನಾಲಯ, ಸಿಬಿಐ, ಐಟಿ ಇಲಾಖೆ, ಪೊಲೀಸ್ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಆರೋಪ ಮಾಡಿದ್ದಾರೆ. 
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮುಖ್ಯಕಾರ್ಯದರ್ಶಿ ಅನ್ಶು ಪ್ರಕಾಶ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣದ ಬಳಿಕ ತಮ್ಮ ಪ್ರತಿಭಟನೆ, ಮುಷ್ಕರಗಳನ್ನು ಮುಂದುವರೆಸುವುದಾಗಿ ಬೆದರಿಕೆ ಹಾಕಿದ್ದ ಆಪ್ ಸಚಿವರುಗಳು ಕಳೆದ ನಾಲ್ಕು ತಿಂಗಳಿನಿಂದಲು ಸಭೆಗಳನ್ನು ಬಹಿಷ್ಕರಿಸುತ್ತಿದ್ದಾರೆಂದು ಹೇಳಿದ್ದಾರೆ. 
ಈ ಪ್ರತಿಭಟನೆಗಳ ಹಿಂದೆ ಪ್ರಧಾನಮಂತ್ರಿಗಳ ಕಚೇರಿಯಿದ್ದು, ಆಪ್ ಸರ್ಕಾರದ ವಿರುದ್ಧ ಪ್ರಧಾನಿ ಕಚೇರಿ ಲೆಫ್ಟಿನಂಟ್ ಗವರ್ನರ್ ಕಚೇರಿ, ಸಿಬಿಐ, ಇಡಿ, ಐಟಿ, ಪೊಲೀಸ್ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. 
ಸಿಬಿಐ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಈ ವರೆಗೂ ಆಪ್ ನಾಯಕರು ಹಾಗೂ ಅವರ ಸಂಬಂಧಿಕರ ವಿರುದ್ಧ 14 ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ. ಆಪ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಪ್ರಕರಣಗಳು ದಾಖಲಾಗಿದ್ದು, ಪ್ರಕರಣ ಸಂಬಂಧ ಈ ವರೆಗೂ ಯಾರೊಬ್ಬರನ್ನೂ ಬಂಧನಕ್ಕೊಳಪಡಿಸಿಲ್ಲ. 
ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್ ಸೇರಿ ನನ್ನ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದರು. ಆ ಎಲ್ಲಾ ಪ್ರಕರಣಗಳು ಏನಾದವು? ಪ್ರಕರಣ ಸಂಬಂಧ ಯಾರೊಬ್ಬರನ್ನೂ ಬಂಧಿಸಿಲ್ಲ. ಇಂತಹ ಪ್ರಕರಣಗಳಲ್ಲಿ ಮೊದಲು ನಮ್ಮನೇ ಏಕೆ ಕೇಂದ್ರ ಕಚೇರಿಗಳು ಬಂಧನಕ್ಕೊಳಪಡಿಸುತ್ತಿಲ್ಲ? ಆಪ್ ಸರ್ಕಾರದ ಕೆಲಸಗಳನ್ನು ಸ್ಥಗಿತಗೊಳಿಸುವ ಕೆಲಸಗಳನ್ನೇಕೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. 
ಇಲ್ಲಸಲ್ಲದ ಪ್ರಕರಣಗಳಲ್ಲಿ ಆಪ ನಾಯಕರನ್ನು ಸಿಲುಕಿಸಲು ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಸಲುವಾಗಿ ಇಂತಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರತೀನಿತ್ಯ ಒಂದಲ್ಲ ಒಂದು ಹೊಸ ಪ್ರಕರಣಗಳು ನಮ್ಮ ವಿರುದ್ಧ ದಾಖಲಾಗುತ್ತಲೇ ಇರುತ್ತವೆ. ಪ್ರಧಾನಮಂತ್ರಿ ಕಾರ್ಯಾಲಯ ಕೇಂದ್ರ ಕಚೇರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ. 
ಇದೇ ವೇಳೆ ಆಪ್ ಸರ್ಕಾರ ಸಾಧನೆಗಳನ್ನು ಪಟ್ಟಿ ಮಾಡಿದ ಅವರು, ದೆಹಲಿ ಸರ್ಕಾರ ಶಾಲೆಗಳು ಹಾಗೂ ಆಸ್ಪತ್ರೆ ಕ್ಷೇತ್ರಗಳ ವಲಯಗಲ್ಲಿ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಬಿಜೆಪಿ ನೇತೃತ್ವದ ಸರ್ಕಾರ ಇರುವ ಇತರೆ ರಾಜ್ಯಗಳಲ್ಲೇಕೆ ಈ ರೀತಿಯ ಉತ್ತಮ ಕಾರ್ಯಗಳನ್ನು ಮಾಡುತ್ತಿಲ್ಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. 

ಇಂದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಹಲ್ಲಾ ಕ್ಲಿನಿಕ್ ಗಳ ಮೇಲೆಯೇ ಸಿಬಿಐ ತನಿಖೆ ನಡೆಸುತ್ತಿದೆ. ಹಲವು ಅಧಿಕಾರಿಗಳಿಗೆ ಸಮನ್ಸ್ ಜಾರಿಗೆ ಮಾಡಿದೆ. ದೆಹಲಿ ಸರ್ಕಾರದ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಆಪ್ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿರುವುದಕ್ಕೆ ಬಹಿರಂಗವಾಗಿಯೇ ಅವರನ್ನು ನಿಂದಿಸಲಾಗುತ್ತಿದೆ. 

ನನ್ನ ವಿರುದ್ಧ ಷಡ್ಯಂತ್ರ ರಚಿಸುವ ಸಲುವಾಗಿ ದೆಹಲಿ ಜಲ ಮಂಡಳಿಯಿಂದ ಜೂನ್.9 ರಂದು ಸಿಬಿಐ ಹಾಗೂ ಎಸಿಬಿ ಕಡತಗಳನ್ನು ತೆಗೆದುಕೊಂಡು ಹೋಗಿವೆ ಎಂದು ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com