ಬೆಂಕಿ ಬಿದ್ದು ನಾಶಗೊಂಡಿದ್ದ ಹಿಂದುಗಳ ಮನೆಗಳನ್ನು ಪುನರ್ ನಿರ್ಮಿಸಿ ಮುಸ್ಲಿಮರ ಕೋಮು ಸೌಹಾರ್ದತೆ!

ರಂಜಾನ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ಬೆಂಕಿ ಬಿದ್ದ ಪರಿಣಾಮ ನಾಶಗೊಂಡಿದ್ದ ಹಿಂದು ಕುಟುಂಬಗಳಿಗೆ ಸೇರಿದ್ದ 6 ಮನೆಗಳನ್ನು ಮುಸ್ಲಿಮರು ಮರು ನಿರ್ಮಾಣ ಮಾಡುವ ಮೂಲಕ ಕೋಮು ಸೌಹಾರ್ದತೆಯನ್ನು ಸಾರಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೋಲ್ಕತಾ: ರಂಜಾನ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ಬೆಂಕಿ ಬಿದ್ದ ಪರಿಣಾಮ ನಾಶಗೊಂಡಿದ್ದ ಹಿಂದು ಕುಟುಂಬಗಳಿಗೆ ಸೇರಿದ್ದ 6 ಮನೆಗಳನ್ನು ಮುಸ್ಲಿಮರು ಮರು ನಿರ್ಮಾಣ ಮಾಡುವ ಮೂಲಕ ಕೋಮು ಸೌಹಾರ್ದತೆಯನ್ನು ಸಾರಿದ್ದಾರೆ. 
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿರುವ ಶಂಶೇರ್ಗಂಜ್ ಈದ್ಗಾ ಮೈದಾನಕ್ಕೆ ಆಗಮಿಸಿದ್ದ 3 ಸಾವಿರಕ್ಕೂ ಅಧಿಕ ಮುಸ್ಲಿಮರು ಹಿಂದು ಕುಟುಂಬಗಳಿಗೆ ಸಹಾಯವನ್ನು ಮಾಡಿದ್ದು, ರೂ.49,000 ಹಣವನ್ನು ನೀಡುವ ಮೂಲಕ 6 ಹಿಂದು ಕುಟುಂಬಗಳ ಮನೆಗಳು ಮರು ನಿರ್ಮಾಣಕ್ಕೆ ಸಹಾಯವನ್ನು ಮಾಡಿದ್ದಾರೆ. 
ಫೂಲ್ ಕುಮಾರಿ ಭಾಸ್ಕರ್ ಎಂಬುವವರು ಕಳೆದ ಗುರುವಾರ ಮರವೊಂದನ್ನು ಸುಡುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಇತರೆ ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇದರ ಪರಿಣಾಮ 6 ಮನೆಗಳು ಬೆಂಕಿಗಾಹುತಿಯಾಗಿದ್ದವು. 
6 ಕುಟುಂಬಗಳ ಒಟ್ಟು 26 ಮಂದಿ ಜನರು ವಾಸಕ್ಕೆ ಸ್ಥಾನವಿಲ್ಲದೆ, ಸಂಕಷ್ಟವನ್ನು ಅನುಭವಿಸುತ್ತಿದ್ದರು. ಮನೆಗಳನ್ನು ಕಳೆದುಕೊಂಡಿದ್ದ ಜನರು ಮಕ್ಕಳ ಕಲ್ಯಾಣ ಕೇಂದ್ರಗಳ ಬಳಿ ಟೆಂಟ್ ಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದರು. 
ಇದನ್ನು ಕಂಡ ಈದ್ಗಾ ಸಮಿತಿ ಕಾರ್ಯದರ್ಶಿ ಲುತ್ಫಾಲ್ ಹಖ್ ಅವರು, ರಂಜಾನ್ ನಿಮಿತ್ತ ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆಂದು ಬರುವ ಮುಸ್ಲಿಮರು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಪ್ರಾರ್ಥನೆಗೆಂದು ಬಂದ ಮುಸ್ಲಿಮರು ಧನ ಸಹಾಯ ಮಾಡಿದ್ದಾರೆ. ಇದರಿಂದ ರೂ.49,000 ಸಂಗ್ರಹ ಮಾಡಿ, ಮನೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಹಿಂದುಗಳಿಗೆ ಸಹಾಯ ಮಾಡಿದ್ದಾರೆ. 
ಮನೆಗೆ ಸ್ವಲ್ಪ ದೂರದಲ್ಲಿಯೇ ನಾನು ದಿನಸಿ ಅಂಗಡಿಯನ್ನು ಇಟ್ಟುಕೊಂಡಿದ್ದೆ. ಅಂಗಡಿ ಬಂದ್ ಮಾಡಿ ಮನೆಗೆ ತೆರಳುತ್ತಿದ್ದ ವೇಳೆ ಮನೆ ಮೇಲೆ ಬೆಂಕಿ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿತ್ತು. ಈ ವೇಳೆ ಕೂಗಾಡಿ, ಗ್ರಾಮಸ್ಥರು ಸ್ಥಳಕ್ಕೆ ಬರುವಂತೆ ಮಾಡಿದ್ದೆ. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭಸಿಲ್ಲ ಎಂದು ಮನೆ ಕಳೆದುಕೊಂಡ ಮಹಿಳೆಯೊಬ್ಬರು ಹೇಳಿದ್ದಾರೆ. 
ಮುಸ್ಲಿಂ ಬಾಂಧವರ ಈ ಸಹಾಯ ಎರಡು ಸಮುದಾಯಗಳ ನಡುವಿನ ಬಾಂಧವ್ಯವನ್ನು ಗಟ್ಟಿ ಮಾಡಿದೆ. ಮನೆಗಳ ಪುನರ್ ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com