ಪೆರಿಯಾರ್ ಪ್ರತಿಮೆ ಮೇಲಿನ ದಾಳಿ ಸರಿಯಲ್ಲ: ಬಿಜೆಪಿ ಮುಖಂಡ ಎಚ್ ರಾಜಾ ಯೂಟರ್ನ್

ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಎಚ್ ರಾಜಾ ಇದೀಗ ಯೂಟರ್ನ್ ಹೊಡೆದಿದ್ದು, ಪೆರಿಯಾರ್ ಪುತ್ಥಳಿ ಮೇಲಿನ ದಾಳಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ಲೆನಿನ್ ಪ್ರತಿಮೆಯಂತೆಯೇ ತಮಿಳುನಾಡಿನಲ್ಲಿರುವ ವಿಚಾರವಾದಿಗಳ ಪ್ರತಿಮೆ ಧ್ವಂಸವಾಗಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಎಚ್ ರಾಜಾ ಇದೀಗ ಯೂಟರ್ನ್ ಹೊಡೆದಿದ್ದು, ಪೆರಿಯಾರ್ ಪುತ್ಥಳಿ ಮೇಲಿನ ದಾಳಿ ಸರಿಯಲ್ಲ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಪ್ರಚೋದನಕಾರಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಎಚ್ ರಾಜಾ, ತ್ರಿಪುರಾದಲ್ಲಿ ಕಮ್ಯುನಿಸ್ಟ್ ಕ್ರಾಂತಿಕಾರಿ  ಲೆನಿನ್ ಪ್ರತಿಮೆಗೆ ಆದ ಗತಿಯೇ ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆಗೆ ಆಗಲಿದೆ ಎಂದು ಎಚ್. ರಾಜಾ ಅವರು ಫೇಸ್ ಬುಕ್ ಪೋಸ್ಟ್ ಹಾಕಿದ್ದರು.  ಅಲ್ಲದೆ ಪೆರಿಯಾರ್ ಒಬ್ಬ ಜಾತಿವಾದಿ, ಅವರ ಪ್ರತಿಮೆಯನ್ನ ಕಿತ್ತೊಗೆಯಬೇಕು ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ತಮಿಳುನಾಡಿನಲ್ಲಿ ನಿನ್ನೆ ಇಬ್ಬರು ದುಷ್ಕರ್ಮಿಗಳು ರಾತ್ರಿ 9 ಗಂಟೆಯ ಸುಮಾರಿಗೆ ವೆಲ್ಲೋರ್ ನಗರ ಪಾಲಿಕೆ ಕಚೇರಿಯಲ್ಲಿರುವ ಪೆರಿಯಾರ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರು. ಪ್ರತಿಮೆ ಧ್ವಂಸಗೊಳಿಸಿದ ವ್ಯಕ್ತಿಗಳನ್ನು ಮುತ್ತುರಾಮನ್ ಮತ್ತು ಫ್ರಾನ್ಸಿಸ್ ಎಂದು ಗರುತಿಸಲಾಗಿದ್ದು, ಕುಡಿತದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಇದೀಗ ತಮ್ಮ ಪೋಸ್ಟ್ ಗೆ ರಾಜ್ಯದ ನಾಯಕಷ್ಟೇ ಅಲ್ಲದೇ ಕೇಂದ್ರದ ಮುಖಂಡರಿಂದಲೂ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಯೂಟರ್ನ್ ಹೊಡೆದಿರುವ ಎಚ್ ರಾಜಾ ಪೆರಿಯಾರ್ ಪುತ್ಥಳಿ ಮೇಲಿನ ದಾಳಿ ಸರಿಯಲ್ಲ ಎಂದು ಮತ್ತೊಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. ಅಲ್ಲದೆ ನಿನ್ನೆ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಕಂಡು ಬಂದ ಪೋಸ್ಟ್ ನಾನು ಹಾಕಿದ್ದಲ್ಲ. ನನ್ನ ಅನುಮತಿ ಇಲ್ಲದೇ ನನ್ನ ಖಾತೆ ನಿರ್ವಹಣೆ ಮಾಡುತ್ತಿರುವವರು ಹಾಕಿದ ಪೋಸ್ಟ್ ಅದು. ನನಗೆ ವಿಚಾರ ತಿಳಿದ ಕೂಡಲೇ ನಾನು ಆ ಪೋಸ್ಟ್ ಅನ್ನು ಡಿಲೀಟ್ ಮಾಡಿಸಿದ್ದೇನೆ ಎಂದು ಹೇಳಿದ್ದಾರೆ.
ಅಂತೆಯೇ ಪೆರಿಯಾರ್ ಪ್ರತಿಮೆ ಮೇಲಿನ ದಾಳಿಯನ್ನು ಖಂಡಿಸಿರುವ ರಾಜಾ, ಪೆರಿಯಾರ್ ಪ್ರತಿಮೆ ಮೇಲಿನ ದಾಳಿ ಸರಿಯಲ್ಲ. ನಮ್ಮ ಭಾವನೆಗಳು ಏನೇ ಇದ್ದರೂ ಅದು ಮೌಖಿಕವಾಗಿ ವ್ಯಕ್ತನವಾಗಬೇಕೇ ಹೊರತು, ಇಂತಹ ದಾಳಿಗಳಿಂದಲ್ಲ ಎಂದು ಹೇಳಿದ್ದಾರೆ.
ರಾಜಾ ಅವರ ಪೋಸ್ಟ್ ಗೆ ತಮಿಳುನಾಡಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಎಐಎಡಿಎಂಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ರಾಜಾ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದವು. ಡಿಎಂಕೆ ಕಾರ್ಯಕಾರಿ ಮುಖ್ಯಸ್ಥ ಎಂಕೆ ಸ್ಟಾಲಿನ್ ರಾಜಾ ವಿರುದ್ಧ ಗೂಂಡಾಕಾಯ್ದೆ ಜಾರಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com