ಬ್ಯಾಂಕ್ ವಂಚನೆ ಪ್ರಕರಣ; ಚಿರಾಗ್ ಕಂಪ್ಯೂಟರ್ ತಯಾರಿಕಾ ಸಂಸ್ಥೆಯ ನಿರ್ದೇಶಕರ ಬಂಧಿಸಿದ ಸಿಬಿಐ!

ಐಡಿಬಿಐ ಬ್ಯಾಂಕ್ ಗೆ ಬರೊಬ್ಬರಿ 515 ಕೋಟಿ ವಂಚನೆ ಮಾಡಿದ ಆರೋಪದಡಿಯಲ್ಲಿ ಚಿರಾಗ್ ಕಂಪ್ಯೂಟರ್ ತಯಾರಿಕಾ ಸಂಸ್ಥೆ ಆರ್ ಪಿ ಇನ್ಫೋ ಸಿಸ್ಚಮ್ಸ್ ನ ನಿರ್ದೇಶಕರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲ್ಕತಾ: ಪಿಎನ್ ಬಿ ಬ್ಯಾಂಕ್ ವಂಚನೆ ಪ್ರಕರಣದ ಬೆನ್ನಲ್ಲೇ ಇಂತಹ ಹತ್ತಾರು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಐಡಿಬಿಐ ಬ್ಯಾಂಕ್ ಗೆ ಬರೊಬ್ಬರಿ 515 ಕೋಟಿ ವಂಚನೆ ಮಾಡಿದ ಆರೋಪದಡಿಯಲ್ಲಿ ಚಿರಾಗ್ ಕಂಪ್ಯೂಟರ್ ತಯಾರಿಕಾ ಸಂಸ್ಥೆ ಆರ್ ಪಿ ಇನ್ಫೋ ಸಿಸ್ಚಮ್ಸ್ ನ ನಿರ್ದೇಶಕರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ಆರ್ ಪಿ ಇನ್ಫೋ ಸಿಸ್ಚಮ್ಸ್ ನಿರ್ದೇಶಕರಾದ ಶಿವಾಜಿ ಪಂಜಾ ಮತ್ತು ಕೌಸ್ತವ್ ರಾಯ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದು, ಐಡಿಬಿಐ ಬ್ಯಾಂಕ್ ಇವರು ಸುಮಾರು 515 ಕೋಟಿ ರೂಗಳನ್ನು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.  
ಚಿರಾಗ್ ಕಂಪ್ಯೂಟರ್ ತಯಾರಿಸುತ್ತಿದ್ದ ಆರ್ ಪಿ ಇನ್ಫೋ ಸಿಸ್ಚಮ್ಸ್ ನ ನಿರ್ದೇಶಕರ ವಿರುದ್ಧ 2015ರಲ್ಲೇ ಐಡಿಬಿಐ ಬ್ಯಾಂಕ್ ಸುಮಾರು 180 ಕೋಟಿ ರೂಗಳ ವಂಚನೆ ಪ್ರಕರಣ ದಾಖಲಿಸಿತ್ತು. ಐಡಿಬಿಐ ಬ್ಯಾಂಕ್ ಮಾತ್ರವಲ್ಲದೇ ಆರ್ ಪಿ ಇನ್ಫೋ ಸಿಸ್ಚಮ್ಸ್ ನಿರ್ದೇಶಕರಾದ ಶಿವಾಜಿ ಪಂಜಾ ಮತ್ತು ಕೌಸ್ತವ್ ರಾಯ್ ಅವರು ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೆರ್ ಮತ್ತು ಜೈಪುರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ (ಈ  ಎರಡೂ ಈಗ ಎಸ್ಬಿಐನ ಭಾಗವಾಗಿದೆ), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಪಟಿಯಾಲ ಮತ್ತು ಫೆಡರಲ್ ಬ್ಯಾಂಕ್  ಸೇರಿದಂತೆ ಇತರೆ 9 ಬ್ಯಾಂಕ್ ಗಳಿಂದ ಒಟ್ಟು 5015.5 ಕೋಟಿ ರೂಗಳ ಸಾಲ ಪಡೆದು ವಂಚಿಸಿದ್ದರು ಎಂದು ತಿಳಿದುಬಂದಿದೆ.
ಆರ್ ಪಿ ಇನ್ಫೋ ಸಿಸ್ಚಮ್ಸ್ ನಿರ್ದೇಶಕರಾದ ಶಿವಾಜಿ ಪಂಜಾ ಮತ್ತು ಕೌಸ್ತವ್ ರಾಯ್ ಅವರು ಈ ಬ್ಯಾಂಕ್ ಗಳಿಗೆ ಸುಳ್ಳು ಮತ್ತು ಕೃತ್ರಿಮ ದಾಖಲೆಗಳು ಅಥವಾ ನಕಲು ದಾಖಲೆಗಳನ್ನು ಸಲ್ಲಿಕೆ ಮಾಡಿ ಬಹುಕೋಟಿ ಸಾಲ ಪಡೆದಿದ್ದರು. 2012ರವರೆಗೂ ಈ ಸಂಸ್ಥೆ ಬ್ಯಾಂಕ್ ಗಳಿಂದ ನಿಗದಿತವಾಗಿ ಸಾಲ ಪಡೆಯುತ್ತಿದ್ದು, ಈ ಸಾಲ ಸುಸ್ತಿ ಸಾಲ ಅಥವಾ ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿ (ಎನ್​ಪಿಎ-ನಾನ್ ಪರ್ಫಾಮಿಂಗ್ ಅಸೆಟ್) ಎಂದು ಪರಿಗಣನೆಗೆ ಒಳಗಾಗಿದೆ. ಇನ್ನು ಬ್ಯಾಂಕ್ ಸಲ್ಲಿಕೆ ಮಾಡಿರುವ ಎಫ್ ಐಆರ್ ನಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ವಿಜಯ್ ಬಾಫ್ನಾ ಮತ್ತು ದೇಬ್ನಾಥ್ ಪಾಲ್ ಹೆಸರೂ ಕೂಡ ನಮೂದಾಗಿದ್ದು, ಆರ್ ಪಿ ಇನ್ಫೋ ಸಿಸ್ಚಮ್ಸ್ ಸಂಸ್ಥೆ ತನ್ನ ಹಣಕಾಸಿನ ವರದಿಗಳನ್ನೇ ತಿರುಚಿ ಸಾಲ ಪಡೆದಿತ್ತು. ಹೀಗಾಗಿ ಸಿಬಿಐ ತನಿಖಾಧಿಕಾರಿಗಳು 2015ರಲ್ಲೇ ಈ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರಂಭಿಸಿದ್ದರು.
ಐಡಿಬಿಐ ಬ್ಯಾಂಕ್ ಆಂತರಿಕ ತನಿಖಾ ಸಮಿತಿ ಆರ್ ಪಿ ಇನ್ಫೋ ಸಿಸ್ಚಮ್ಸ್ ಅಕ್ರಮವನ್ನು ಬಯಲೆಗೆಳೆದಿತ್ತು. ಇದೀಗ ಸಂಸ್ಥೆಯ ನಿರ್ದೇಶಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com