ಬಿಜೆಪಿಯೊಂದಿಗೆ ಮೈತ್ರಿ ಇಲ್ಲ: ಪವನ್ ಕಲ್ಯಾಣ್

ಮುಂಬರುವ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜನಸೇನಾ ಪಕ್ಷದ ಸಂಸ್ಥಾಪಕ ಮತ್ತು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಿಜಯವಾಡ: ಮುಂಬರುವ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜನಸೇನಾ ಪಕ್ಷದ ಸಂಸ್ಥಾಪಕ ಮತ್ತು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಹೇಳಿದ್ದಾರೆ.
ವಿಜಯವಾಡದಲ್ಲಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂಬಂಧ ಬಿಜೆಪಿ ಕುರಿತು ತೆಲುಗು ಪ್ರಜೆಗಳಲ್ಲಿ ನಕಾರಾತ್ಮಕ ಭಾವನೆ ಇದೆ. ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಯಾವುದೇ ಪಕ್ಷ ಕೂಡ ಮುಂದಾಗುವುದಿಲ್ಲ ಎಂದು ಹೇಳಿದ್ದಾರೆ. 
ಜನಸೇನಾ ಪಕ್ಷದ ನಾಲ್ಕನೇ ವರ್ಷದ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಮಾತನಾಡಿದ ಪವನ್ ಕಲ್ಯಾಣ್, ಟಿಡಿಪಿ ಮುಖ್ಯಸ್ಥ ಹಾಗೂ ಸಿಎಂ ಚಂದ್ರಬಾಬು ನಾಯ್ಡು ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಸಿಎಂ ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರ ಲೋಕೇಶ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. 
ವಿಭಜಿತ ಆಂಧ್ರ ಪ್ರದೇಶದ ಅಭಿವೃದ್ಧಿ ಕುರಿತು ಚಿಂತಸಬೇಕಾದ ಸರ್ಕಾರದ ಮುಖ್ಯಸ್ಥರೇ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಹೊಸ ರಾಜಧಾನಿ ನಿರ್ಮಾಣ ಯೋಜನೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿದ್ದಾರೆ.  ಬಿಜೆಪಿಯೊಂದಿಗೆ ಸೇರಿ ರಹಸ್ಯ ಒಪ್ಪಂದ ಮಾಡಿಕೊಂಡಿರುವ ನಾಯ್ಜು, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡಿಸುವ ಬದಲಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಗೆ ಒಪ್ಪಿಗೆ ನೀಡಿದ್ದರು. ಈಗ ಆಂಧ್ರ ಪ್ರದೇಶದ ಜನತೆ ತಿರುಗಿಬಿದ್ದಿರುವ ಹಿನ್ನಲೆಯಲ್ಲಿ ರಾಜಕೀಯ ನಾಟಕವಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಮುಂಬರುವ ವಿಧಾನಸಭಾ ಚುನಾವಣೆ ಕುರಿತು ಮಾತನಾಡಿದ ಪವನ್, ರಾಜಕೀಯದಲ್ಲಿ ಅಧಿಕಾರವೇ ಬೇಕು ಎಂದಿದ್ದರೆ ನಾನು 2014ರಲ್ಲೇ ನಮ್ಮ ಪಕ್ಷ 60-70 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು 10-12 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರುತ್ತಿತ್ತು. ಆದರೆ ನಾನು ಸ್ಥಿರ ಸರ್ಕಾರದಿಂದ ಅಭಿವೃದ್ಧಿ ಸಾಧ್ಯ ಎಂದು ಟಿಡಿಪಿ ಮತ್ತು ಬಿಜೆಪಿಯನ್ನುಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಇಲ್ಲದೆ ಬೆಂಬಲಿಸಿದ್ದೆ. ಆದರೆ ನನ್ನನಿರೀಕ್ಷೆಗಳು ಹುಸಿಯಾಗಿದ್ದು, ಜನರ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಈ ಎರಡೂ ಪಕ್ಷಗಳು ವಿಫಲವಾಗಿವೆ. 
ಆಂಧ್ರ ಪ್ರದೇಶದ ಜನರ ಭಾವನೆಗಳಿಗೆ ಧಕ್ಕೆ ತರುವಂತೆ ಜೇಟ್ಲಿ ಮಾತನಾಡಿದ್ದಾರೆ. ಭಾವೋಧ್ವೇಗದಿಂದ ಆಂಧ್ರ ಪ್ರದೇಶದ ಆರ್ಥಿಕ ನೆರವಿನ ಪ್ರಮಾಣವನ್ನು ಹೆಚ್ಚು ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಜೇಟ್ಲಿ ನೀಚ ಹೇಳಿಕೆ ನೀಡಿದ್ದಾರೆ. ಇಂದು ಪ್ರತ್ಯೇತ ತೆಲಂಗಾಣ ರಚನೆಯಾಗಿದೆ ಎಂದರೆ ಅದಕ್ಕೆ ಕಾರಣ ಅಲ್ಲಿನ ಜನರ ಪ್ರಬಲ ಹೋರಾಟ ಮತ್ತು ಅವರ ಭಾವಾವೇಶ. ಒಬ್ಬರ ಭಾವನೆಗಳಿಗೆ ಯಾರು ಧಕ್ಕೆ ತರಬಾರದು ಎಂದು ಹೇಳಿದ್ದಾರೆ.
ಪವನ್ ಕಲ್ಯಾಣ್ ಆರೋಪ ತಿರಸ್ಕರಿಸಿದ ಟಿಡಿಪಿ
ಇನ್ನು ನಟ ಪವನ್ ಕಲ್ಯಾಣ್ ಅವರ ಆರೋಪಗಳನ್ನು ಟಿಡಿಪಿ ತಿರಸ್ಕರಿಸಿದ್ದು, ಅವರ ಆರೋಪದಲ್ಲಿ ಹುರುಳಿಲ್ಲ. ವಿಶೇಷ ಆರ್ಥಿಕ ಪ್ಯಾಕೇಜ್ ಗೆ ಒಪ್ಪಿಗೆ ನೀಡಿದ್ದೇ ಆಗಿದ್ದರೆ, ನಾವೇಕೆ ಮೈತ್ರಿ ಕಡಿದುಕೊಂಡು ಹೊರಬರಬೇಕಿತ್ತು ಎಂದು ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com