68 ಕೋಟಿ ರು. ವಂಚನೆ: ಕೆನರಾ ಬ್ಯಾಂಕ್‌ ಮಾಜಿ ಸಿಎಂಡಿ, 5 ಸಹೋದ್ಯೋಗಿಗಳ ವಿರುದ್ಧ ಸಿಬಿಐ ಚಾರ್ಜ್ ಶೀಟ್

68.38 ಕೋಟಿ ರುಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಕೆನರಾ ಬ್ಯಾಂಕಿನ ಮಾಜಿ ಸಿಎಂಡಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 68.38 ಕೋಟಿ ರುಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಕೃತ  ಕೆನರಾ ಬ್ಯಾಂಕಿನ ಮಾಜಿ ಸಿಎಂಡಿ ಹಾಗೂ ಅವರ ಐವರು ಸಹೋದ್ಯೋಗಿಗಳ ವಿರುದ್ಧ ಸಿಬಿಐ ಸೋಮವಾರ  ಚಾರ್ಜ್‌ ಶೀಟ್‌ ಸಲ್ಲಿಸಿದೆ.
2014ರಲ್ಲಿ ದೆಹಲಿ ಮೂಲದ ಕಂಪನಿಯೊಂದಕ್ಕೆ ನೀಡಿದ್ದ 68.38 ಕೋಟಿ ರುಪಾಯಿ ಸಾಲ ಮರುಪಾವತಿಸದೆ ಬ್ಯಾಂಕ್ ಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನರಾ ಬ್ಯಾಂಕ್ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್‌ ಕೆ ದುಬೆ, ಮಾಜಿ ಕಾರ್ಯನಿರ್ವಹಕ ನಿರ್ದೇಶಕರಾದ ಅಶೋಕ್ ಕುಮಾರ್ ಗುಪ್ತಾ ಹಾಗೂ ವಿಎಸ್ ಕೃಷ್ಣನ್, ಮಾಜಿ ಡಿಜಿಎಂ, ಮುಖೇಶ್ ಮಹಾಜನ್, ಮಾಜಿ ಮುಖ್ಯ ಜನರಲ್ ಮ್ಯಾನೇಜರ್ ಟಿ ಶ್ರೀಕಾಂತನ್ ಹಾಗೂ ಮಾಜಿ ಸಹಾಯಕ ಜನರಲ್ ಮ್ಯಾನೇಜರ್ ಉಪೇಂದ್ರ ದುಬೆ ವರ ವಿರುದ್ಧ ಸಿಬಿಐ ಇಂದು ಸಿಬಿಐ ವಿಶೇಷ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ.
ಸಿಬಿಐ ಇದೇ ಪ್ರಕರಣದಲ್ಲಿ ದೆಹಲಿ ಮೂಲದ ಒಕೇಶನಲ್‌ ಸಿಲ್ವರ್‌ ಕಂಪೆನಿ ಲಿಮಿಟೆಡ್‌ ನ ಇಬ್ಬರು ನಿರ್ದೇಶಕರಾದ ಕಪಿಲ್‌ ಗುಪ್ತಾ ಮತ್ತು ರಾಜ್‌ ಕುಮಾರ್‌ ಗುಪ್ತಾ ಎಂಬವರ ವಿರುದ್ಧವೂ ಚಾರ್ಜ್‌ ಶೀಟ್‌ ದಾಖಲಿಸಿದೆ. 
ಆರೋಪಿಗಳು ಬ್ಯಾಂಕಿನ ಹಣವನ್ನು ತಮ್ಮ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಬೋಗಸ್‌ ಕಂಪೆನಿಗಳಿಗಾಗಿ ನುಂಗಿ  ಹಾಕಿರುವುದಾಗಿ ಚಾರ್ಜ್‌ ಶೀಟ್‌ನಲ್ಲಿ ತಿಳಿಸಲಾಗಿದೆ.
ವಜ್ರ ಮತು ಚಿನ್ನಾಭರಣಗಳ ಸಗಟು ವ್ಯಾಪಾರದಲ್ಲಿ ತೊಡಗಿಕೊಂಡಿರುವ ಒಕೇಶನಲ್‌ ಸಿಲ್ವರ್‌ ಪ್ರೈವೇಟ್‌ ಲಿಮಿಟೆಡ್‌ (ಒಪಿಎಸ್‌ಎಲ್‌) ನ ಉನ್ನತ ಅಧಿಕಾರಿಗಳು ಮತ್ತು ಕೆನರಾ ಬ್ಯಾಂಕ್‌ ಮಾಜಿ ಸಿಎಂಡಿ ಆರ್‌ ಕೆ ದುಬೆ ಅವರ ನಡುವೆ ನೇರ ಸಂಪರ್ಕ ಇತ್ತೆಂಬುದಕ್ಕೆ ಸಾಕ್ಷ್ಯಗಳನ್ನು ಪತ್ತೆ ಹಚ್ಚಿರುವುದಾಗಿ ಕ್ರೈಮ್‌ ಬ್ಯೂರೋ ಹೇಳಿದೆ. 
ಕಪಿಲ್‌ ಗುಪ್ತಾ ಮತ್ತು ರಾಜ್‌ ಕುಮಾರ್‌ ಗುಪ್ತಾ ಅವರಿಗೆ ದುಬೆ ಅವರ ನೇರ ಸಂಪರ್ಕವಿದ್ದು ಆ ನೆಲೆಯಲ್ಲಿ ಬ್ಯಾಂಕಿನಿಂದ ಸಾಲ ಪಡೆಯುತ್ತಿದ್ದರು. ಸಾಲ ಮಂಜೂರು ಮಾಡುವಾಗ ಕಮಲಾ ನಗರ ಮೂಲದ ಕಂಪೆನಿಗೆ ಅನುಕೂಲ ಮಾಡಿಕೊಡುವಂತೆ ಸಿಎಂಡಿ ತನ್ನ ಅಧೀನ ಅಧಿಕಾರಿಗಳಿಗೆ ಕಳುಹಿಸಿದ್ದ ಟಿಪ್ಪಣಿ ಸಂದೇಶಗಳು ತನ್ನ ಬಳಿ ಇವೆ ಎಂದು ಸಿಬಿಐ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com