ಅಪಘಾತವಲ್ಲ ಕೊಲೆ..? ಅಕ್ರಮ ಗಣಿಗಾರಿಕೆಯ ರಹಸ್ಯ ಕಾರ್ಯಾಚರಣೆ ಪತ್ರಕರ್ತರ ಜೀವಕ್ಕೇ ಎರವಾಯಿತೇ?

ಸೋಮವಾರ ನಡೆದ ಅಪಘಾತ ಪ್ರಕರಣಗಳಲ್ಲಿ ಸಾವನ್ನಪ್ಪಿದ ಇಬ್ಬರು ಪತ್ರಕರ್ತರದ್ದು ಕೊಲೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಾವನ್ನಪ್ಪಿದ ಪತ್ರಕರ್ತ ಸಂದೀಪ್ ಶರ್ಮಾ
ಸಾವನ್ನಪ್ಪಿದ ಪತ್ರಕರ್ತ ಸಂದೀಪ್ ಶರ್ಮಾ
ಭಿಂಡ್‌: ಸೋಮವಾರ ನಡೆದ ಅಪಘಾತ ಪ್ರಕರಣಗಳಲ್ಲಿ ಸಾವನ್ನಪ್ಪಿದ ಇಬ್ಬರು ಪತ್ರಕರ್ತರದ್ದು ಕೊಲೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮರಳು ಗಣಿಗಾರಿಕೆ ಅಕ್ರಮದ ಕುರಿತು ಕುಟುಕು ಕಾರ್ಯಾಚರಣೆ ನಡೆಸಿ ವರದಿ ಮಾಡಿದ್ದ ಭಿಂಡ್‌ನ ಸ್ಥಳೀಯ ಟಿವಿ ವಾಹಿನಿ ವರದಿಗಾರ ಸಂದೀಪ್‌ ಶರ್ಮಾ ಅವರ ಮೇಲೆ ಸೋಮವಾರ ಟ್ರಕ್‌ ಹರಿದ ಪರಿಣಾಮ ಅವರು ಮೃತಪಟ್ಟಿದ್ದಾರೆ. ಇಲ್ಲಿನ ಅತೇರ್‌ ರಸ್ತೆಯ ಪೊಲೀಸ್‌ ಠಾಣೆಯ ಮುಂಭಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಸಂದೀಪ್‌ ಅವರ ಮೇಲೆ ಮರಳು ಸಾಗಣೆ ಟ್ರಕ್‌ ಹರಿದಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
‘ಮರಳು ಮಾಫಿಯಾದವರು ನನ್ನನ್ನು ಕೊಲ್ಲಬಹುದು. ಸೂಕ್ತ ಭದ್ರತೆ ಒದಗಿಸಿ’ ಎಂದು ಮಧ್ಯಪ್ರದೇಶದ ಪೊಲೀಸ್‌ ಮಹಾನಿರ್ದೇಶಕರು ಮತ್ತು ಮಾನವಹಕ್ಕುಗಳ ಆಯೋಗಕ್ಕೆ ಇತ್ತೀಚೆಗೆ ಸಂದೀಪ್‌ ಮನವಿ ಮಾಡಿದ್ದರು ಎಂದು ಸಂದೀಪ್‌ ಅವರ ಸೋದರ ಸಂಬಂಧಿ ವಿಕಾಸ್‌ ಪುರೋಹಿತ್‌ ಕೊಟ್ವಾಲಿ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸಂದೀಪ್ ಸಹೋದರ ವಿಕಾಸ್ ಆರೋಪಿಸಿರುವಂತೆ ಮರಳು ಗಣಿಗಾರಿಕೆ ಅಕ್ರಮ ಮತ್ತು ಈ ಹಗರಣದಲ್ಲಿ ಉಪಪ್ರಾಂತೀಯ ಪೊಲೀಸ್‌ ಅಧಿಕಾರಿಯ ಪಾತ್ರದ ಕುರಿತು ಸಂದೀಪ್‌ ವರದಿ ಮಾಡಿದ್ದರಂತೆ. ವರದಿ ಪ್ರಕಟವಾದ ನಂತರ ಆ ಪೊಲೀಸ್‌ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿತ್ತು. ಈ ಬೆಳವಣಿಗೆಗಳ ನಂತರ ಸಂದೀಪ್‌ಗೆ ಅಪರಿಚಿತರಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ವಿಕಾಸ್ ಪುರೋಹಿತ್‌ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
‘ಅಪಘಾತದ ನಂತರ ಟ್ರಕ್‌ ಚಾಲಕ ನಾಪತ್ತೆಯಾಗಿದ್ದಾನೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ ರಚಿಸಲಾಗಿದೆ. ಸೆಕ್ಷನ್‌ 304ರ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ಭಿಂಡ್‌ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್‌ ಖರೆ ತಿಳಿಸಿದ್ದಾರೆ.
ಅಪಘಾತವಲ್ಲ ಕೊಲೆ?
ಇನ್ನು ಪ್ರಕರಣ ಸಂಬಂಧ ಪೊಲೀಸರು ವಶಪಡಿಸಿಕೊಂಡಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಟ್ರಕ್ ಚಾಲಕ ಉದ್ದೇಶ ಪೂರ್ವಕವಾಗಿಯೇ ಬೈಕ್ ನತ್ತ ಟ್ರಕ್ ಚಲಾಯಿಸಿಕೊಂಡು ಹೋಗಿರುವುದು ಪತ್ತೆಯಾಗಿದ್ದು, ಇದೀಗ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com