ಸಂಗ್ರಹ ಚಿತ್ರ
ದೇಶ
ಸಿಬಿಎಸ್ಇ: ಸೋರಿಕೆಯಾದ ಪ್ರಶ್ನೆಪತ್ರಿಕೆಗೆ ಪೋಷಕರು ಹಣ ನೀಡಿದ್ದರು- ಪೊಲೀಸರು
ಸೋರಿಕೆಯಾದ ಸಿಬಿಎಸ್ಇ ಪ್ರಶ್ನೆಪತ್ರಿಕೆಗಳನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳ ಪೋಷಕರು ಹಣ ನೀಡಿದ್ದರು ಎಂದು ದೆಹಲಿ ಪೊಲೀಸರು...
ನವದೆಹಲಿ: ಸೋರಿಕೆಯಾದ ಸಿಬಿಎಸ್ಇ ಪ್ರಶ್ನೆಪತ್ರಿಕೆಗಳನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳ ಪೋಷಕರು ಹಣ ನೀಡಿದ್ದರು ಎಂದು ದೆಹಲಿ ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಕುರಿತಂತೆ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದರು, ತನಿಖೆ ವೇಳೆ ಸೋರಿಕೆಯಾದ ಪ್ರಶ್ನೆಪತ್ರಿಗಳನ್ನು ಪಡೆಯಲು ಪೋಷಕರು ಹಣ ನೀಡಿದ್ದರೆಂಬ ಮಾಹಿತಿ ತಿಳಿದುಬಂದಿದೆ.
ಸೋರಿಕೆಯಾದ ಪ್ರಶ್ನೆಪತ್ರಿಗಳನ್ನು ಹಂಚಿಕೆ ಮಾಡಲಾಗಿತ್ತು ವಾಟ್ಸ್ ಅಪ್ ಗ್ರೂಪ್ ನಲ್ಲಿದ್ದ ವಿದ್ಯಾರ್ಥಿಗಳು ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸೋರಿಕೆಯಾದ ಪ್ರಶ್ನೆಪತ್ರಿಕೆ ಪಡೆಯಲು ಪೋಷಕರು ಹಣ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ.
ಪ್ರಕರಣ ಸಂಬಂಧ ದೆಹಲಿ ಪೊಲೀಸರು ಈ ವರೆಗೂ 10 ವಾಟ್ಸ್'ಆ್ಯಪ್ ಗ್ರೂಪ್ ಗಳನ್ನು ಕಂಡು ಹಿಡಿದಿದ್ದು, ಪ್ರತಿಯೊಂದು ಗ್ರೂಪ್ ನಲ್ಲಿಯೂ 50-60 ಜನರಿದ್ದಾರೆಂದು ತಿಳಿದುಬಂದಿದೆ.
ಗ್ರೂಪ್ ನಲ್ಲಿರುವ ವಿದ್ಯಾರ್ಥಿಗಳ ಪೋಷಕರು ಹೇಳಿಕೆ ನೀಡಿದ್ದು, ಸೋರಿಕೆಯಾದ ಪ್ರಶ್ನೆಪತ್ರಿಕೆಗಳಿಗೆ ಹಣ ನೀಡಿದ್ದೆವು ಎಂದು ಹೇಳಿದ್ದಾರೆ.
ರೂ.100 ರಿಂದ ರೂ.10,000ವರೆಗೂ ಹಣವನ್ನು ನೀಡಲಾಗಿದೆ. ಪೋಷಕರ ಹೇಳಿಕೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್ಐಟಿ ಹಿರಿಯ ಅದಿಕಾರಿ ಹೇಳಿದ್ದಾರೆ.
ಇದಲ್ಲದೆ, ದೆಹಲಿ ಅಪರಾಧ ವಿಭಾಗ ಪೊಲೀಸರು ಗೂಗಲ್ ಮೊರೆ ಹೋಗಿದ್ದು, ಕೈಬರಹದ ಪ್ರಶ್ನೆಪತ್ರಿಕೆಯ ಫೋಟೋವನ್ನು ಸಿಬಿಎಸ್ಇ ಮುಖ್ಯಸ್ಥರಿಗೆ ಕಳುಹಿಸಿದ it.deven532@gmail.com ಇಮೇಲ್ ಕುರಿತ ಮಾಹಿತಿಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ವ್ಯಕ್ತಿ ಮಾಡಿರುವ ಇಮೇಲ್ ನಲ್ಲಿ ಒಟ್ಟು ಕೈಬರಹ ಪ್ರಶ್ನೆಪತ್ರಿಕೆಯ ಒಟ್ಟು 12 ಫೋಟೋಗಳಿದ್ದು, ಈ ಫೋಟೋಗಳು ವಾಟ್ಸ್ ಆ್ಯಪ್ ನಲ್ಲಿ ಸೋರಿಕೆಯಾಗಿದೆ. ಇಮೇಲ್ ಕಳುಹಿಸಿದ ಸ್ಥಳ ಹಾಗೂ ಇಮೇಲ್'ನ್ನು ಯಾವಾರ ತೆರೆಯಲಾಗಿತ್ತು ಎಂಬೆಲ್ಲಾ ಇತರೆ ಮಾಹಿತಿಗಳನ್ನು ನೀಡುವಂದೆ ಈಗಾಗಲೇ ಗೂಗಲ್ ಬಳಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಕುರಿತಂತೆ ಸಿಬಿಎಸ್ಇ ನೀಡಿದ ದೂರಿನ ಅನ್ವಯ ದೆಹಲಿ ಪೊಲೀಸರು ಮಾರ್ಚ್ 27 ಹಾಗೂ 28 ರಂದು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ