ಜಮ್ಮು-ಕಾಶ್ಮೀರ: ಪುಲ್ವಾಮದಲ್ಲಿ ಉಗ್ರರ ದಾಳಿ; ಓರ್ವ ಯೋಧ ಹುತಾತ್ಮ, ಓರ್ವ ನಾಗರೀಕನಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ಓರ್ವ ನಾಗರೀಕ ಗಾಯಗೊಂಡು, ಓರ್ವ ಯೋಧ ಹುತಾತ್ಮರಾಗಿದ್ದಾರೆಂದು ಶನಿವಾರ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ; ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ಓರ್ವ ನಾಗರೀಕ ಗಾಯಗೊಂಡು, ಓರ್ವ ಯೋಧ ಹುತಾತ್ಮರಾಗಿದ್ದಾರೆಂದು ಶನಿವಾರ ತಿಳಿದುಬಂದಿದೆ. 
ಸಿಆರ್'ಪಿಎಫ್ 182 ಬೆಟಾಲಿಯನ್ ಪಡೆಯ ಮಂದೀಪ್ ಕುಮಾರ್ ಹುತಾತ್ಮರಾದ ಯೋಧರಾಗಿದ್ದಾರೆಂದು ವರದಿಗಳು ತಿಳಿಸಿವೆ. 
ಪುಲ್ವಾಮ ಜಿಲ್ಲೆಯ ವಾಗುಮ್ ಎಂಬ ಗ್ರಾಮದಲ್ಲಿರುವ ಮನೆಯಲ್ಲಿ 4-6 ಉಗ್ರರು ಅಡಗಿ ಕುಳಿತಿದ್ದು, ಸ್ಥಳದಲ್ಲಿ ಯೋಧರು ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಉಗ್ರರು ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮನೆಯ ಮಾಲೀಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಲೀಕನ ತೋಳಿಗೆ ಗುಂಡು ಹೊಕ್ಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ. 
ನಾಗರೀಕರಿಗೆ ಯಾವುದೇ ರೀತಿಯ ಸಮಸ್ಯೆಗಳು ಹಾಗೂ ಪ್ರಾಣಾಪಾಯಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಿರುವ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರೆದಿದ್ದು, ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಸ್ಥಳದಲ್ಲಿ ಕತ್ತಲು ಕವಿದ ವಾತಾವರಣವಿದ್ದು, ಸ್ಥಳದಿಂದ ತಪ್ಪಿಸಿಕೊಳ್ಳಲು ಉಗ್ರರು ಯತ್ನ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಸ್ಥಳದಲ್ಲಿ ರಾಷ್ಟ್ರೀಯ ರೈಫಲ್ಸ್, ವಿಶೇಷ ಕಾರ್ಯಾಚರಣೆ ಪಡೆಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಅರೆ ಸೇನಾ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. 
ಒಂದೆಡೆ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದರೆ, ಮತ್ತೊಂದೆಡೆ ಸ್ಥಳೀಯರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿ, ಪ್ರತಿಭಟನೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ. 
ಈ ನಡುವೆ ವದಂತಿಗಳು ಹರಡದಂತೆ ಮುಂಜಾಗ್ರತೆ ವಹಿಸಿರುವ ಅಧಿಕಾರಿಗಳು ಪುಲ್ವಾಮ ಜಿಲ್ಲೆಯಾದ್ಯಂತ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿವೆ. ಬಾರಾಮುಲ್ಲಾ ಟೌನ್ ಹಾಗೂ ಬನ್ನಿಹಾರ್ ಟೌನ್ ನಡುವೆ ರೈಲು ಸೇವೆಗಳನ್ನೂ ಕೂಡ ಸ್ಥಗಿತಗೊಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com