ತೂತುಕುಡಿ: ಹಿಂಸಾಚಾರದಿಂದ ನಲುಗಿದ್ದ ತಮಿಳುನಾಡಿನ ತೂತುಕುಡಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಸೆಕ್ಷನ್ 144 ಅನ್ವಯ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆಯನ್ನು ಹಿಂತೆಗೆದುಕೊಳ್ಳಲಾಗಿದೆ.
ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಸ್ಟರ್ಲೈಟ್ ಕಂಪನಿ ಸ್ಥಗಿತಕ್ಕೆ ಆಗ್ರಹಿಸಿ ನಡೆದಿದ್ದ ಪ್ರತಿಭಟನೆ ಹಿಂಸಾರೂಪ ತಾಳಿ 14 ಮಂದಿ ಸಾವನ್ನಪ್ಪಿದ್ದರು.
ಸೆಕ್ಷನ್ 144 ರ ಅನ್ವಯ ಒಂದೇ ಕಡೆ ನಾಲ್ವರು ಸೇರುವುದನ್ನು ನಿರ್ಬಂಧಿಸುತ್ತದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಇದನ್ನು ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗಿತ್ತು.
ಎಂದಿನಂತೆ ಸಹಜ ಪರಿಸ್ಥಿತಿ ಕಂಡುಬಂದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಯಾವುದೇ ಹಿಂಸಾಚಾರದಂತಹ ಚಟುವಟಿಕೆಗಳು ಕಂಡುಬಂದಿಲ್ಲ ಎಂದು ತೂತುಕುಡಿ ಜಿಲ್ಲಾಧಿಕಾರಿ ಹೇಳಿದ್ದಾರೆ.