ನಿಪಾಹ್‌ ವೈರಸ್ ಗೆ ಬಾವಲಿಗಳೇ ಕಾರಣ: ಎನ್‌ಸಿಡಿಸಿ ವರದಿ

ಕೇರಳದಲ್ಲಿ 13 ಜನರ ಬಲಿ ತೆಗೆದುಕೊಂಡು ತನ್ನ ಮರಣ ಮೃದಂಗ ಮುಂದುವರೆಸಿರುವ ಮಾರಣಾಂತಿಕ ನಿಪಾಹ್ ವೈರಾಣು ಸೊಂಕಿಗೆ ಬಾವಲಿಗಳೇ ಕಾರಣ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ ಸಿಡಿಸಿ) ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಯಿಕ್ಕೋಡ್: ಕೇರಳದಲ್ಲಿ 13 ಜನರ ಬಲಿ ತೆಗೆದುಕೊಂಡು ತನ್ನ ಮರಣ ಮೃದಂಗ ಮುಂದುವರೆಸಿರುವ ಮಾರಣಾಂತಿಕ ನಿಪಾಹ್ ವೈರಾಣು ಸೊಂಕಿಗೆ ಬಾವಲಿಗಳೇ ಕಾರಣ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ ಸಿಡಿಸಿ) ಹೇಳಿದೆ.
ಕಳೆದ ಹಲವು ದಿನಗಳಿಂದ ನಿಪಾಹ್ ವೈರಾಣು ಸೋಂಕಿಗೆ ಕಾರಣವಾದ ಅಂಶಗಳ ಕುರಿತು ಎನ್ ಸಿಡಿಸಿ ತಜ್ಞರು ತನಿಖೆ ನಡೆಸಿದ್ದರು. ಈ ತನಿಖೆ ಇದೀಗ ಪೂರ್ಣಗೊಂಡಿದ್ದು, ನಿಪಾಹ್ ವೈರಾಣು ಸೋಂಕಿಗೆ ಬಾವಲಿಗಳೇ ಕಾರಣ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಎನ್‌ಸಿಡಿಸಿ ಜಂಟಿ ನಿರ್ದೇಶಕ ಎಂ.ಕೆ. ಶೌಕತ್ ಅಲಿ ಅವರು, 'ನಿಪಾಹ್ ವೈರಸ್ ಅನ್ನು ಹಣ್ಣು ತಿನ್ನುವ ಬಾವಲಿಗಳು ಹರಡುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಪರೀಕ್ಷಾ ಫಲಿತಾಂಶ ಇದನ್ನು ಇನ್ನಷ್ಟು ಸಾಬೀತುಪಡಿಸುತ್ತದೆ. ಒಂದು ವೇಳೆ ಬಾವಲಿಗಳ ದೇಹ ದ್ರವಗಳ ಮಾದರಿಗಳ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ಬಂದರೂ ಅದು ವೈಜ್ಞಾನಿಕ ಸತ್ಯವನ್ನು ಅಲ್ಲಗಳೆಯುವುದಿಲ್ಲ. ಆದರೆ ಈ ನಿಪಾಗ್ ವೈರಾಣುವನ್ನು ಎಲ್ಲ ಬಾವಲಿಗಳೂ ಹರಡುವಿದಿಲ್ಲ. ಆದರೆ ಕೆಲ ವರ್ಗದ ಬಾವಲಿಗಳು ಮಾತ್ರ ಹರಡುತ್ತವೆ'ಎಂದು  ತಿಳಿಸಿದ್ದಾರೆ.
ಕೇರಳದ ಕೊಯಿಕ್ಕೋಡ್ ನಲ್ಲಿ ನಿಪಾಹ್ ವೈರಾಣುಗೆ ತುತ್ತಾಗಿ ಸಾವು ಸಂಭವಿಸಿದ ಬೆನ್ನಲ್ಲೇ ಕೇರಳ ಸರ್ಕಾರ ಶಂಕಿತ ಪ್ರಕರಣ ಪತ್ತೆ ಹಚ್ಚಲು ಹಾಗೂ ನಿರಂತರ ಕಣ್ಗಾವಲಿಗೆ ಎನ್ ಸಿಡಿಸಿ ನೆರವು ಕೋರಿತ್ತು. ಈ ಹಿನ್ನಲೆಯಲ್ಲಿ ಕೇರಳದಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಎನ್ ಸಿಡಿಸಿ ತಜ್ಞರ ತಂಡ ತನಿಖೆ ಆರಂಭಿಸಿತ್ತು. ಅಲ್ಲದೆ ವೈರಸ್ ಕುರಿತ ತನಿಖೆ ಹಾಗೂ ಗುಣಮಟ್ಟದ ಕಾರ್ಯಾಚರಣೆ ಪ್ರಕ್ರಿಯೆಗಳನ್ನು ಸಿದ್ಧಗೊಳಿಸುವ ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ಎನ್‌ಸಿಡಿಸಿ ತಂಡ ಕೇರಳ ರಾಜ್ಯ ಸರ್ಕಾರಕ್ಕೆ ನೆರವು ನೀಡಿತ್ತು. ಎನ್‌ಸಿಡಿಸಿಯ ಎರಡನೆ ನಿಯೋಗ ಈಗ ಪೆರಂಬ್ರಾದಲ್ಲಿ ಮೊಕ್ಕಾಂ ಹೂಡಿ, ಹರಡುತ್ತಿರುವ ನಿಪಾಹ್ ಸೋಂಕಿನ ಬಗ್ಗೆ ಅಧ್ಯಯನ ನಡೆಸುತ್ತಿದೆ. ಶಂಕಿತ ಪ್ರಕರಣ ಪತ್ತೆ ಹಚ್ಚಲು ಹಾಗೂ ನಿರಂತರ ಕಣ್ಗಾವಲಿಗೆ ರಾಜ್ಯ ಸರ್ಕಾರ ಎನ್‌ಸಿಡಿಸಿ ನೆರವನ್ನು ಕೋರಿತ್ತು. 
ಈ ಬಗ್ಗೆ ಮಾತನಾಡಿರುವ ಶೌಕತ್ ಅಲಿ ಅವರು, ನಿಪಾಹ್ ಸೋಂಕಿನ ಶಂಕಿತರ ಪಟ್ಟಿಯಲ್ಲಿರುವವರು ಪ್ರವಾಸ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೇ ಇರುವ ಮೂಲಕ ಸೋಂಕನ್ನು ಸಮರ್ಥವಾಗಿ ನಿಯಂತ್ರಿಸಬಹುದು ಎಂದು ಹೇಳಿದ್ದಾರೆ. ಅಲ್ಲದೆ ಕೇರಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹೊಸ ಪ್ರಕರಣಗಳು ವರದಿಯಾಗುತ್ತಿರುವ ಮಟ್ಟ ತೀವ್ರವಾಗಿ ಇಳಿಕೆಯಾಗಿದೆ. ಇದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. 
ಈ ನಡುವೆ ಹಣ್ಣು ತಿನ್ನುವ ಬಾವಲಿಗಳ ದೇಹದ್ರವಗಳ ಮಾದರಿಯನ್ನು ಇದುವರೆಗೆ ಸಂಗ್ರಹಿಸಿಲ್ಲ. ಇದರೊಂದಿಗೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ಪುಣೆಯ ನ್ಯಾಷನಲ್ ಇನ್‌ ಸ್ಟಿಟ್ಯೂಟ್ ಆಫ್ ವೈರಾಲಜಿಯ ತಜ್ಞರು, ಅರಣ್ಯ ಇಲಾಖೆಯ ಸಿಬ್ಬಂದಿ ಬಾವಲಿಗಳ ದೇಹ ದ್ರವ ಮಾದರಿ ಸಂಗ್ರಹಿಸಲು ತೆರಳಿದ್ದಾರೆ. ಸೋಮವಾರ ಸಂಜೆಯಿಂದ ಮಳೆ ಸುರಿಯುತ್ತಿರುವುದರಿಂದ ಹಣ್ಣು ತಿನ್ನುವ ಬಾವಲಿಗಳ ದೇಹದ್ರವ ಮಾದರಿಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪಶು ಸಂಗೋಪನೆ ಇಲಾಖೆ ತಿಳಿಸಿದೆ. ಬಾವಲಿಗಳನ್ನು ಹಿಡಿಯುವ ಸಂದರ್ಭ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಸೋಂಕಿತ ಬಾವಲಿಗಳ ದೇಹ ದ್ರವ ಮಾದರಿ ಸಂಗ್ರಹಿಸುವುದು ಅತಿ ಅಪಾಯದ ಕೆಲಸ. ಮಾದರಿಯನ್ನು ಬೋಪಾಲದಲ್ಲಿರುವ ಅತ್ಯಧಿಕ ಭದ್ರತೆಯ ಪ್ರಾಣಿ ರೋಗಗಳ ರಾಷ್ಟ್ರೀಯ ಸಂಸ್ಥೆಗೆ ಕಳುಹಿಸಿ ಕೊಡಲಾಗುವುದು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com