ಮತಯಂತ್ರ ದೋಷದ ವಿಚಾರ ಇತ್ಯರ್ಥವಾಗುವವರೆಗೂ ಪ್ರತಿಪಕ್ಷಗಳು ಉಪ ಚುನಾವಣೆ ಬಹಿಷ್ಕರಿಸಬೇಕು: ಉದ್ಧವ್ ಠಾಕ್ರೆ

ಮತ ಯಂತ್ರದಲ್ಲಿನ ದೋಷದ ವಿಚಾರ ಇತ್ಯರ್ಥವಾಗುವವರೆಗೂ ಪ್ರತಿಪಕ್ಷಗಳು ಚುನಾವಣೆ ಬಹಿಷ್ಕರಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಮತಯಂತ್ರದಲ್ಲಿನ ದೋಷದ ವಿಚಾರ ಇತ್ಯರ್ಥವಾಗುವವರೆಗೂ ಪ್ರತಿಪಕ್ಷಗಳು ಚುನಾವಣೆ ಬಹಿಷ್ಕರಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಇಂದು ಪ್ರಕಟವಾದ 4 ಲೋಕಸಭೆ, 10 ವಿಧಾನಸಭಾ ಕ್ಷೇತ್ರಗಳ ಉಪ-ಚುನಾವಣೆಯ ಫಲಿತಾಂಶದ ಕುರಿತು ಮಾತನಾಡಿದ ಉದ್ಧವ್ ಠಾಕ್ರೆ, ಮತಯಂತ್ರಗಳ ಕುರಿತಾದ ಅನುಮಾನಗಳು ದೂರವಾಗುವವರೆಗೂ ಪ್ರತಿಪಕ್ಷಗಳು ಚುನಾವಣೆಗಳಿಂದ ದೂರವಿರಬೇಕು ಎಂದು ಹೇಳಿದ್ದಾರೆ. ಪ್ರಮುಖವಾಗಿ ಪಾಲ್ಗಾರ್ ಉಪ ಚುನಾವಣೆಯಲ್ಲಿ ಮತದಾನದ ಪ್ರಮಾಣ ದಿಢೀರ್ ಹೆಚ್ಚಳವಾಗಿರುವುದರ ಕುರಿತು ಶಂಕೆ ವ್ಯಕ್ತಪಡಿಸಿರುವ ಅವರು, ಪಾಲ್ಗಾರ್ ಕ್ಷೇತ್ರದಲ್ಲಿ ಸುಮಾರು 8 ಲಕ್ಷ ಮಂದಿ ಮತದಾನ ಮಾಡಿದ್ದು, ಈ ಪೈಕಿ 6 ಲಕ್ಷ ಮತದಾರರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ.  ಹೀಗಾಗಿ ಪಾಲ್ಗಾರ್ ಸೋಲನ್ನು ತಾವು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. 
ಬಿಜೆಪಿ ಪಕ್ಷ ಚುನಾವಣೆ ಗೆಲ್ಲಲು ಸಕಲ ಷಡ್ಯಂತ್ರಗಳನ್ನೂ ಬಳಕೆ ಮಾಡಿದೆ. 2014ರಲ್ಲಿ ಭಾರಿ ಅಂತರದ ಜಯಭೇರಿ ಬಾರಿಸಿದಾಗ ಈ ಪಕ್ಷ ಕನಿಷ್ಠ 25 ವರ್ಷ ಆಡಳಿತ ನಡೆಸುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಕೇವಲ ನಾಲ್ಕೇ ವರ್ಷಗಳಲ್ಲಿ ಇದರ ಬಣ್ಣ ಬಯಲಾಗಿದೆ. ಕಳೆದ ಹಲವು ಉಪ ಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಅಧಿಕಾರಕ್ಕೆ ಬಂದ ಬಳಿಕ ಮೈತ್ರಿಕೂಟದ ಪಕ್ಷಗಳು ಅದಕ್ಕೆ ಬೇಕಿಲ್ಲ ಎಂದು ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ. 
ಕಳೆದ ಹಲವು ದಿನಗಳಿಂದ ಇವಿಎಂಗಳ ಕುರಿತು ಆರೋಪಗಳು ಕೇಳಿಬರುತ್ತಿವೆ. ಇವಿಎಂಗಳನ್ನು ತಿರುಚಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿದ್ದು. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಸಂಗತಿಯಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಬಿಸಿಲಿನಿಂದಾಗಿ ಇವಿಎಂಗಳಲ್ಲಿ ದೋಷ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಚುನಾವಣೆಗಳನ್ನು ಐಪಿಎಲ್ ಪಂದ್ಯಗಳ ಹಾಗೆ ರಾತ್ರಿ ವೇಳೆ ನಡೆಸಬೇಕೇ ಎಂದು ಪ್ರಶ್ನಿಸಿದ್ದಾರೆ.  ಅಂತೆಯೇ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ರೀತಿಯಲ್ಲೇ ಚುನಾವಣಾ ಆಯುಕ್ತರನ್ನೂ ಕೂಡ ನೇಮಕ ಮಾಡುವ ಬದಲು ಆಯ್ಕೆ ಮಾಡಬೇಕು ಎಂದು ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com