ಸೇನೆಯಿಂದ ನಿವೃತ್ತಿ, ಸೇವೆಯಿಂದಲ್ಲ... ಸ್ಮಾರಕ, ಸಂಗ್ರಹಾಲಯವಾಗಿ 'ಐಎನ್ಎಸ್ ವಿರಾಟ್' ಪರಿವರ್ತನೆ

ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಭಾರತದ ಹೆಮ್ಮೆಯ ಯುದ್ಧ ವಿಮಾನ ವಾಹಕ ನೌಕೆ ನಿವೃತ್ತಿಯಾಗಿದ್ದರೂ, ಅದರ ಸೇವೆ ಮುಂದುವರೆಯಲಿದೆ..
ಐಎನ್ಎಸ್ ವಿರಾಟ್ (ಸಂಗ್ರಹ ಚಿತ್ರ)
ಐಎನ್ಎಸ್ ವಿರಾಟ್ (ಸಂಗ್ರಹ ಚಿತ್ರ)
ಮುಂಬೈ: ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಭಾರತದ ಹೆಮ್ಮೆಯ ಯುದ್ಧ ವಿಮಾನ ವಾಹಕ ನೌಕೆ ನಿವೃತ್ತಿಯಾಗಿದ್ದರೂ, ಅದರ ಸೇವೆ ಮುಂದುವರೆಯಲಿದೆ.. 
ಅರೆ ಭಾರತೀಯ ಸೇನೆ ಐಎನ್ಎಸ್ ವಿರಾಟ್ ಸೇವೆಯನ್ನು ಮುಂದುವರೆಸಿದೆಯೇ?.. ಐಎನ್ಎಸ್ ವಿರಾಟ್ ನೌಕೆ ಸೇನೆಯಿಂದ ನಿವೃತ್ತಿಯಾಗಿದ್ದರೂ ಸೇವೆಯಿಂದ ನಿವೃತ್ತಿ ಪಡೆದಿಲ್ಲ. ಇಷ್ಟು ದಿನ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಐಎನ್ಎಸ್ ವಿರಾಟ್ ನೌಕೆ ಇನ್ನು ಮುಂದೆ ಸ್ಮಾರಕ-ಸಂಗ್ರಹಾಲಯವಾಗಿ ತನ್ನ ಸೇವೆ ಸಲ್ಲಿಸಲಿದೆ. ಭಾರತೀಯ ನೌಕಾಸೇನೆಯಲ್ಲಿ ಅತ್ಯಂತ ಸುದೀರ್ಘಾವಧಿ ಸೇವೆ ಸಲ್ಲಿಸಿರುವ ಹೆಗ್ಗಳಿಕೆ ಇರುವ INS ವಿರಾಟ್ ಅನ್ನು ಸ್ಮಾರಕ ಮತ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಲು ವೇದಿಕೆ ಸಿದ್ಧವಾಗಿದೆ.
ಈ ಕುರಿತಂತೆ ಮಹಾರಾಷ್ಟ್ರ ಸರ್ಕಾರದ ಸಂಪುಟ ಸಭೆ ಮಹತ್ವದ ನಿರ್ಣಯ ತೆಗೆದುಕೊಂಡಿದ್ದು, ದೇಶದ ಅತಿ ದೊಡ್ಡ ತೇಲುವ, ನೌಕಾ ಸಂಗ್ರಹಾಲಯ ಹಾಗೂ ಸಾಹಸ ಕೇಂದ್ರದ ಸ್ಥಾಪನೆಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. 
ಈ ಐಎನ್ಎಸ್ ವಿರಾಟ್ ಅನ್ನು ಸ್ಮಾರಕವನ್ನಾಗಿಸಿ, ಇಲ್ಲಿ ಸ್ಮರಣೀಯ ಗ್ಯಾಲರಿಗಳಲ್ಲದೇ ಸ್ಕ್ಯೂಬಾ ಡೈವಿಂಗ್‌, ಸೇಲಿಂಗ್‌ ನಂಥ ಸಾಹಸ ಕ್ರೀಡೆಗಳು, ಮರ್ಚೆಂಟ್‌ ನೌಕಾ ಸಿಬ್ಬಂದಿಗೆ ತರಬೇತಿ ನೀಡಲು ನೌಕೆಯನ್ನು ಬಳಕೆ ಮಾಡುವ ಕುರಿತು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ 852 ಕೋಟಿ ರು ವೆಚ್ಚದಲ್ಲಿ ವಿರಾಟ್ ಗೆ ಮಹತ್ವದ ಮಾರ್ಪಾಡುಗಳನ್ನು ಮಾಡಲು ಸಾರ್ವಜನಿಕ-ಖಾಸಗಿ ಪಾಲುದಾರಿಕೆ(PPP) ಮಾಡಿಕೊಳ್ಳಲಾಗಿದೆ. ಸಿಂಧುದುರ್ಗದಿಂದ ಏಳು ನಾಟಿಕಲ್‌ ಮೈಲು ದೂರದಲ್ಲಿರುವ ಮಲ್ವಾನ್‌ ಕರಾವಳಿಯ ನಿವಾತಿ ಗುಡ್ಡೆಗಳ ಬಳಿ ವಿರಾಟ್ ಅನ್ನು ಪ್ರತಿಷ್ಠಾಪನೆ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ.
ಜಗತ್ತಿನಾದ್ಯಂತ ಕೇವಲ ಏಳು ವಿಮಾನ ವಾಹಕ ನೌಕೆಗಳನ್ನು ಸ್ಮಾರಕ/ಸಂಗ್ರಹಾಲಯ, ಥೀಮ್‌ ಪಾರ್ಕ್‌ ಅಥವಾ ಐಶಾರಾಮಿ ಹೊಟೆಲ್‌ ಗಳಾಗಿ ಪರುವರ್ತಿಸಲಾಗಿದ್ದು, ಈ ಪಟ್ಟಿಗೆ ಇದೀಗ ಐಎನ್ಎಸ್ ವಿರಾಟ್ ಕೂಡ ಸೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1986ರಲ್ಲಿ ಭಾರತೀಯ ನೌಕಾಸೇನೆಗೆ ಸೇರಿಕೊಂಡ ಐಎನ್ಎಸ್ ವಿರಾಟ್‌, ಜಗತ್ತಿನ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆಯಾಗಿದೆ. 2017ರ ಮಾರ್ಚ್‌ ನಲ್ಲಿ ನೌಕೆಯನ್ನು ಸೇವೆಯಿಂದ ನಿವೃತ್ತಿಗೊಳಿಸಲಾಗಿದ್ದು, ಸದ್ಯ ಮುಂಬೈ ನೌಕಾ ಬಂದರಿನಲ್ಲಿ ನೌಕೆ ಲಂಗರು ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com