ಶಬರಿಮಲೆಯಲ್ಲಿ ಪ್ರತಿಭಟನೆ
ದೇಶ
ಅಯ್ಯಪ್ಪ ಭಕ್ತರ ಬಂಧನ ವಿರೋಧಿಸಿ ಶಬರಿಮಲೆಯಲ್ಲಿ ಬಿಜೆಪಿ, ಆರ್ ಎಸ್ಎಸ್ ತೀವ್ರ ಪ್ರತಿಭಟನೆ
ಖ್ಯಾತ ಪವಿತ್ರ ಯಾತ್ರಾ ಸ್ಥಳ ಕೇರಳದ ಶಬರಿಮಲೆಯಲ್ಲಿ ಮತ್ತೆ ಪ್ರತಿಭಟನೆ ಭುಗಿಲೆದ್ದಿದ್ದು, ಅಯ್ಯಪ್ಪ ಭಕ್ತರ ಬಂಧನ ವಿರೋಧಿಸಿ ಬಿಜೆಪಿ ಮತ್ತು ಆರ್ ಎಸ್ಎಸ್ ಕಾರ್ಯಕರ್ತರು ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ತಿರುವನಂತಪುರಂ: ಖ್ಯಾತ ಪವಿತ್ರ ಯಾತ್ರಾ ಸ್ಥಳ ಕೇರಳದ ಶಬರಿಮಲೆಯಲ್ಲಿ ಮತ್ತೆ ಪ್ರತಿಭಟನೆ ಭುಗಿಲೆದ್ದಿದ್ದು, ಅಯ್ಯಪ್ಪ ಭಕ್ತರ ಬಂಧನ ವಿರೋಧಿಸಿ ಬಿಜೆಪಿ ಮತ್ತು ಆರ್ ಎಸ್ಎಸ್ ಕಾರ್ಯಕರ್ತರು ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಯ್ಯಪ್ಪ ದರ್ಶನಕ್ಕೆ ತೆರಳಿದ್ದ ಬಲಪಂಥೀಯ ನಾಯಕರೂ ಸೇರಿದಂತೆ ಸುಮಾರು 70ಕ್ಕೂ ಅಧಿಕ ಅಯ್ಯಪ್ಪ ಭಕ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮತ್ತು ಆರ್ ಎಸ್ಎಸ್ ಕೇರಳದಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತಿವೆ. ಕೇರಳದ ಕೊಚ್ಚಿ, ಅರಾನ್ಮುಲ, ಕೊಲ್ಲಂ, ಅಲಪುಳಾ, ರನ್ನಿ, ತೋಡುಪುಳ, ಕಲಾಡಿ, ಮಲಪ್ಪುರಂ ಮತ್ತು ಇಡುಕ್ಕಿಯಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ಅಂತೆಯೇ ಶಬರಿಮಲೆಯಲ್ಲಿ ಹೇರಲಾಗಿರುವ ನಿಷೇಧಾಜ್ಞೆಯನ್ನು ಹಿಂದಕ್ಕೆ ಪಡೆದು, ಭದ್ರತಾ ಪಡೆಗಳ ಸಂಖ್ಯೆಯನ್ನು ಕಡಿತಗೊಳಿಸಬೇಕು. ಅಲ್ಲದೆ ಶಬರಿಮಲೆಯಲ್ಲಿ ರಾತ್ರಿ ವೇಳೆ ತಂಗುವುದನ್ನು ನಿಷೇಧಿಸಿರುವ ಕ್ರಮವನ್ನೂ ಕೂಡ ಸರ್ಕಾರ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಇನ್ನು ಶಬರಿಮಲೆ ಮಹಿಳೆಯರ ಪ್ರವೇಶಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಕೆಲ ಹಿಂದೂಪರ ಸಂಘಟನೆಗಳು ಸನ್ನಿಧಾನಂನಲ್ಲಿ ಮೊಕ್ಕಾಂ ಹೂಡಿದ್ದು, ಯಾವುದೇ ಕಾರಣಕ್ಕೂ ದರ್ಶನ ಮುಗಿಯುವವರೆಗೂ ತಾವು ಸನ್ನಿಧಾನಂ ಬಿಟ್ಟು ತೆರಳುವುದಿಲ್ಲ ಎಂದು ಹೇಳಿವೆ. ಆದರೆ ಇದು ಸರ್ಕಾರಕ್ಕೆ ಮತ್ತು ಸ್ಥಳೀಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು, ಇದೇ ಕಾರಣಕ್ಕೆ ಸನ್ನಿಧಾನಂ ಮಾತ್ರವಲ್ಲದೇ ಇಡೀ ಶಬರಿಮಲೆಯಾದ್ಯಂತ ರಾತ್ರಿ ಹೊತ್ತು ತಂಗಬಾರದು ಎಂದು ಕಠಿಣ ಆದೇಶ ಹೊರಡಿಸಿದೆ.
ಅಂತೆಯೇ ಈ ರೀತಿ ತಂಗಿದ್ದ ಕೆಲ ಅಯ್ಯಪ್ಪ ಭಕ್ತರನ್ನೂ ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಇದು ಪ್ರಸ್ತುತ ಪ್ರತಿಭಟನೆಗೆ ಕಾರಣ ಎನ್ನಲಾಗುತ್ತಿದೆ.


