'ಅಯ್ಯಪ್ಪನ ಭಕ್ತರು ಉಗ್ರಗಾಮಿಗಳಲ್ಲ, ನಿಷೇಧಾಜ್ಞೆ ಏಕೆ?'; ಕೇರಳ ಸರ್ಕಾರದ ವಿರುದ್ಧ ಕೇಂದ್ರ ಸಚಿವರ ಕಿಡಿ

ಅಯ್ಯಪ್ಪ ಭಕ್ತರ ಬಂಧನ ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ಮುಂದುವರೆದಿರುವಂತೆಯೇ ಶಬರಿಮಲೆಯಲ್ಲಿ ಹೇರಲಾಗಿರುವ ನಿಷೇಧಾಜ್ಞೆ ಕುರಿತಂತೆ ಕೇಂದ್ರ ಸಚಿವ ಕೆಜೆ ಆಲ್ಫಾನ್ಸ್ ಅವರು ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತಿರುವನಂತಪುರಂ: ಅಯ್ಯಪ್ಪ ಭಕ್ತರ ಬಂಧನ ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ಮುಂದುವರೆದಿರುವಂತೆಯೇ ಶಬರಿಮಲೆಯಲ್ಲಿ ಹೇರಲಾಗಿರುವ ನಿಷೇಧಾಜ್ಞೆ ಕುರಿತಂತೆ ಕೇಂದ್ರ ಸಚಿವ ಕೆಜೆ ಆಲ್ಫಾನ್ಸ್ ಅವರು ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಕೇರಳದಲ್ಲಿ ಪ್ರತಿಭಟನೆ ಭುಗಿಲೆದ್ದಿರುವಂತೆಯೇ ಇಂದು ಕೇಂದ್ರ ಪ್ರವಾಸೋಧ್ಯಮ ರಾಜ್ಯ ಸಚಿವ ಕೆಜೆ ಆಲ್ಫಾನ್ಸ್ ಅವರು ಶಬರಿಮಲೆಗೆ ಭೇಟಿ ನೀಡಿದ್ದು ಅಲ್ಲಿನ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾರ್ಷಿಕ ಮಂಡಲ ಪೂಜೆ ನಿಮಿತ್ತ ಶಬರಿಮಲೆಯಲ್ಲಿ ನಡೆಯುತ್ತಿರುವ ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸಿದ್ದೇನೆ. ಶೌಚಾಲಯ ನಿರ್ಮಾಣದ ಕುರಿತು ತಮಗೆ ಅಸಮಾಧಾನವಿದ್ದು, 6 ಅಡಿ ಎತ್ತರದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಭಕ್ತರು ಹಾರಿಕೊಂಡು ಶೌಚಾಲಯಕ್ಕೆ ಹೋಗಲಾಗುತ್ತದೆಯೇ ಎಂದು ಕಿಡಿಕಾರಿದರು.
ಅಂತೆಯೇ ಶಬರಿಮಲೆಯಲ್ಲಿ ವಿಧಿಸಲಾಗಿರುವ ನಿಷೇಧಾಜ್ಞೆ ಕುರಿತು ಮಾತನಾಡಿದ ಅವರು, ಕೇರಳದಲ್ಲಿ ಪ್ರಸ್ತುತ ಪರಿಸ್ಥಿತಿ ತುರ್ತು ಪರಿಸ್ಥಿತಿಗಿಂತಲೂ ದಾರುಣವಾಗಿದೆ. ಅಯ್ಯಪ್ಪನ ಭಕ್ತರಿಗೆ ಕಿರುಕುಳ ನೀಡಲಾಗುತ್ತಿದ್ದು, ಅಯ್ಯಪ್ಪನ ಭಕ್ತರು ಉಗ್ರಗಾಮಿಗಳಲ್ಲ. ಅವರು ಅಯ್ಯಪ್ಪನ ದರ್ಶನಕ್ಕೆ ಬಂದಿದ್ದಾರೆಯೇ ಹೊರತು ಭಯೋತ್ಪಾದನೆಗಾಗಿ ಅಲ್ಲ. ಹೀಗಿರುವಾಗ ಶಬರಿಮಲೆಯಲ್ಲಿ ಸೆಕ್ಷನ್ 144 ಅನ್ನು ಪಿಣರಾಯಿ ವಿಜಯನ್ ಸರ್ಕಾರ ಜಾರಿಗೊಳಿಸಿದ್ದೇಕೆ. ಪವಿತ್ರ ಸ್ಥಳದಲ್ಲಿ ಸುಮಾರು 15 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಅಯ್ಯಪ್ಪ ಭಕ್ತರನ್ನು ಕೇರಳ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಅಯ್ಯಪ್ಪನ ದರ್ಶನಕ್ಕೆ ಬಂದವರನ್ನು ಬಂಧಿಸಲಾಗುತ್ತಿದ್ದು, ಸುಖಾಸುಮ್ಮನೆ ಭಕ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಭಕ್ತರ ವಿರುದ್ಧ ವಿವಿಧ ಪ್ರಕರಣಗಳನ್ನು ಹೇರಿ ವಶಕ್ಕೆ ಪಡೆಯಲಾಗುತ್ತಿದ್ದು, ಸರ್ಕಾರ ಕ್ರಮದ ನಿಜಕ್ಕೂ ಖಂಡನೀಯ ಎಂದು ಹೇಳಿದ್ದಾರೆ.
ಇನ್ನು 2 ತಿಂಗಳ ಮಂಡಲ ಪೂಜೆ ನಿಮಿತ್ತ ಕಳೆದ ಶುಕ್ರವಾರ ಸಂಜೆ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ತೆರೆಯಲಾಗಿದ್ದು, ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಶಬರಿಮಲೆಗೆ ತೆರಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com