ಇಂದಿನ ಪರಿಸ್ಥಿತಿ ತುರ್ತುಪರಿಸ್ಥಿತಿಗಿಂತಲೂ ದಾರುಣ: ಅರುಣ್ ಶೌರಿ

ಭಾರತ ದೇಶದ ಪ್ರಸ್ತುತ ಪರಿಸ್ಥಿತಿ 1975-77ರ ನಡುವಿನ ತುರ್ತು ಪರಿಸ್ಥಿತಿಗಿಂತಲೂ ಧಾರುಣವಾಗಿದೆ ಎಂದು ಖ್ಯಾತ ಪತ್ರಕರ್ತ ಮತ್ತು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಹೇಳಿದ್ದಾರೆ.
ಅರುಣ್ ಶೌರಿ
ಅರುಣ್ ಶೌರಿ
ನವದೆಹಲಿ: ಭಾರತ ದೇಶದ ಪ್ರಸ್ತುತ ಪರಿಸ್ಥಿತಿ 1975-77ರ ನಡುವಿನ ತುರ್ತು ಪರಿಸ್ಥಿತಿಗಿಂತಲೂ ದಾರುಣವಾಗಿದೆ ಎಂದು ಖ್ಯಾತ ಪತ್ರಕರ್ತ ಮತ್ತು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಟಾಟಾ ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಂಡು 'ನ್ಯಾಯಾಂಗ ವ್ಯವಸ್ಥೆಯೊಳಗಿನ ಅಪಾಯ' ಎಂಬ ವಿಚಾರದ ಕುರಿತು ಮಾತನಾಡಿದ ಅರುಣ್ ಶೌರಿ ಅವರು, ಕೇಂದ್ರದ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಂತೆಯೇ ವಿಪಕ್ಷಗಳೆಲ್ಲಾ ಒಗ್ಗೂಡಿ ಮುಂದಿನ 2019ರ ಲೋಕಸಭಾ ಚುನಾವಣೆಯಲ್ಲಿ ಹೋರಾಡಿದರೆ ಪ್ರಧಾನಿ ಮೋದಿಯ ಸರ್ವಾಧಿಕಾರಿ ಧೋರಣೆಗೆ ಬ್ರೇಕ್ ಹಾಕಬಹುದು ಎಂದು ಅಭಿಪ್ರಾಯಪಟ್ಟರು.
'ಈಗಿನ ಪರಿಸ್ಥಿತಿಗೆ ಹೋಲಿಕೆ ಮಾಡಿದರೆ 1975-77ರ ನಡುವಿನ ತುರ್ತು ಪರಿಸ್ಥಿತಿಯೇ ಮೇಲು ಎಂದೆನಿಸುತ್ತದೆ. ಏಕೆಂದರೆ ಅಂದು ಇಂದಿರಾಗಾಂಧಿ ಅವರಿಗೆ ತಮ್ಮ ಕೃತ್ಯದ ಬಗ್ಗೆ ಅನುಕಂಪವಿತ್ತು. ಆದರೆ ಈಗಿನ ಪ್ರಧಾನಿಗೆ ಅದಿಲ್ಲ. ಅಂದು ಇಂದಿರಾಗಾಂಧಿ ಸುಮಾರು 75 ಸಾವಿರ ಮಂದಿಯನ್ನು ಜೈಲಿಗಟ್ಟಿದ್ದರು. ಆದರೆ ಅದಕ್ಕೊಂದು ಮಿತಿ ಇತ್ತು. ಅದನ್ನು ಇಂದಿರಾಗಾಂಧಿ ದಾಟಿರಲಿಲ್ಲ. ಆದರೆ ಇಂದಿನ ಪ್ರಧಾನಿಗೆ ತಮ್ಮ ಕೃತ್ಯದ ಬಗ್ಗೆ ಅನುಕಂಪವೇ ಇಲ್ಲ. ದೇಶದ ಪ್ರಮುಖ ಸಂಸ್ಥೆಗಳನ್ನೇ ಬುಡಮೇಲು ಮಾಡ ಹೊರಟಿದ್ದಾರೆ ಎಂದು ಅರುಣ್ ಶೌರಿ ಹೇಳಿದ್ದಾರೆ.
2014ರ ಸರ್ಕಾರಿ ವಿರೋಧಿ ಅಲೆಯಲ್ಲಿ ಮೋದಿ ಗೆದ್ದಿರಬಹುದು. ಆದರೂ ಅವರ ಮತ ಗಳಿಕೆ ಕೇವಲ ಶೇ.31ರಷ್ಟು ಮಾತ್ರ. ಅಂದರೆ ಶೇ.69ರಷ್ಟು ಮಂದಿ ಮೋದಿ ವಿರುದ್ಧವಾಗಿ ಮತ ಹಾಕಿದ್ದಾರೆ. ಇದರಿಂದಲೇ ತಿಳಿಯುತ್ತದೆ ಜನತೆಗೂ ಮೋದಿ ಮೇಲೆ ಸಂಪೂರ್ಣ ವಿಶ್ವಾಸವಿಲ್ಲ ಎಂದು. ಒಂದು ವೇಳೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ಒಗ್ಗೂಡಿ ಕಾರ್ಯ ನಿರ್ವಹಿಸಿದರೆ 2019ರ ಚುನಾವಣೆಯಲ್ಲಿ ಖಂಡಿತಾ ಮೋದಿಯನ್ನು ಮಣಿಸಬಹುದು ಎಂದು ಶೌರಿ ಹೇಳಿದ್ದಾರೆ.
ಒಂದು ವೇಳೆ ವಿಪಕ್ಷಗಳು ಇದಕ್ಕೆ ಒಪ್ಪದಿದ್ದರೆ ಖಂಡಿತಾ ವಿಪಕ್ಷಗಳ ಮತಗಳು ವಿಭಜನೆಗೊಂಡು ಮತ್ತೆ ಮೋದಿಗೆ ನೆರವಾಗುತ್ತದೆ. ಅಲ್ಲದೆ ಈಗಿರುವ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎಂದು ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಅರುಣ್ ಶೌರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com