ಛೆ, ಶ್ರೀಲಂಕಾ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಭಾರತಕ್ಕೆ ಹೀಗೆ ಮಾಡಬಾರದಿತ್ತು!

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಸನತ್ ಜಯಸೂರ್ಯ ಹಾಗೂ ಇನ್ನೂ ಇಬ್ಬರು ಕ್ರಿಕೆಟಿಗರ ವಿರುದ್ಧ ಗಂಭೀರ ಅರೋಪ ಕೇಳಿಬಂದಿದೆ.
ಸನತ್ ಜಯಸೂರ್ಯ
ಸನತ್ ಜಯಸೂರ್ಯ
ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಸನತ್ ಜಯಸೂರ್ಯ ಹಾಗೂ ಇನ್ನೂ ಇಬ್ಬರು ಕ್ರಿಕೆಟಿಗರ ವಿರುದ್ಧ ಗಂಭೀರ ಅರೋಪ ಕೇಳಿಬಂದಿದೆ. 
ಜಯಸೂರ್ಯ ಹಾಗೂ ಇತರ ಕ್ರಿಕೆಟಿಗರು ಭಾರತಕ್ಕೆ ಕೊಳೆತ ಅಡಿಕೆಯನ್ನು ಅಕ್ರಮವಾಗಿ  ಕಳ್ಳಸಾಗಣೆ ಮಾಡುತ್ತಿದ್ದ ಆರೋಪ ಕೇಳಿಬಂದಿದ್ದು, ಇಂಡೋನೇಷ್ಯಾದಿಂದ ಶ್ರೀಲಂಕಾಗೆ ಭಾರತದ ಮಾರ್ಗವಾಗಿ ವಸ್ತುಗಳನ್ನು ಸಾಗಣೆ ಮಾಡುವಾಗ ತೆರಿಗೆ-ತಪ್ಪಿಸುವ ಮೋಸದ ವ್ಯವಹಾರವನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. 
ಕಂದಾಯ ಇಲಾಖೆಯ ಗುಪ್ತಚರ ವಿಭಾಗದ ಅಧಿಕಾರಿಗಳು ನಾಗ್ಪುರದಲ್ಲಿ ಸುಮಾರು ಮಿಲಿಯನ್ ಗಟ್ಟಲೆ ಬೆಲೆ ಬಾಳುವ ಅಡಿಕೆಯನ್ನು ವಶಪಡಿಸಿಕೊಂಡಿದ್ದು, ತನಿಖೆಯಲ್ಲಿ ಜಯಸೂರ್ಯ ಅವರ ಹೆಸರು ಕೇಳಿಬಂದಿದೆ. 
ದೈನಿಕ್ ಭಾಸ್ಕರ್ ವರದಿಯ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸನತ್ ಜಯಸೂರ್ಯ ಅವರನ್ನು ಮುಂಬೈ ಗೆ ಕರೆಸಿ ವಿಚಾರಾಣೆ ನಡೆಸಿದ್ದಾರೆ. ಇನ್ನು ಇದೇ ವೇಳೆ ಪ್ರಕರಣದಲ್ಲಿ ಶಾಮೀಲಾಗಿರುವ ಇನ್ನೂ ಇಬ್ಬರು ಕ್ರಿಕೆಟಿಗರನ್ನು ಡಿ.2 ರಂದು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತದ ಅಧಿಕಾರಿಗಳು ಈಗಾಗಲೇ ಶ್ರೀಲಂಕಾ ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಹೆಚ್ಚಿನ ತನಿಖೆಗಾಗಿ ಆಗ್ರಹಿಸಿದ್ದಾರೆ. 
ಎಸ್ಎಎಫ್ ಟಿಎ (ದಕ್ಷಿಣ ಏಷ್ಯಾ ಫ್ರೀ ಟ್ರೇಡ್ ಏರಿಯಾ) ಕಾಯ್ದೆಯ ಪ್ರಕಾರ ಭಾರತ-ಲಂಕಾ ನಡುವೆ ನಿರ್ದಿಷ್ಟ ಸರಕುಗಳಿಗೆ ತೆರಿಗೆ ಸಬ್ಸಿಡಿ ನೀಡಲು ಒಪ್ಪಂದವಿದೆ. ಇದರ ಲಾಭ ಪಡೆಯುವುದಕ್ಕೆ ಕೆಲವು ನಕಲಿ ಸಂಸ್ಥೆಗಳು ಇಂಡೋನೇಷ್ಯಾದಿಂದ ತರಲಾಗಿದ್ದ ಅಡಿಕೆಯನ್ನು ಭಾರತದ ಮೂಲಕ ಶ್ರೀಲಂಕಾಗೆ ಸಾಗಣೆ ಮಾಡುತ್ತಿದ್ದರು ಎಂದು ಕಂದಾಯ ಇಲಾಖೆ ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 
ತಮ್ಮ ಜನಪ್ರಿಯತೆಯನ್ನೇ ಬಳಸಿಕೊಂಡು ಲಂಕಾ ಅಧಿಕಾರಿಗಳಿಂದ ವ್ಯಾಪಾರ ಪರವಾನಗಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದ ಕ್ರಿಕೆಟಿಗರು ನಕಲಿ ಸಂಸ್ಥೆಗಳನ್ನು ಸೃಷ್ಟಿಸಿದ್ದರು. ಇಂಡೋನೇಷ್ಯಾದಿಂದ ನೇರವಾಗಿ ಆಮದು ಮಾಡಿಕೊಂಡ ಅಡಿಕೆಗೆ ಶೇ.108 ರಷ್ಟು ಆಮದು ಸುಂಕ ಪಾವತಿ ಮಾಡಬೇಕು ಆದರೆ ಶ್ರೀಲಂಕಾದ ಕೆಲವು ಉದ್ಯಮಿಗಳು ಕೊಳೆತ ಅಡಿಕೆಯನ್ನು ಮೂಲಬೆಲೆಯ ಶೇ.25 ರಷ್ಟಕ್ಕೆ ನಾಗ್ಪುರದಲ್ಲಿರುವವರಿಗೆ ಅದನ್ನು ಮಾರಾಟ ಮಾಡುತ್ತಿದ್ದರು.  ಭಾರತದಲ್ಲಿ ಅದನ್ನು ಖರೀದಿಸಿದವರು ಉತ್ತಮ ಗುಣಮಟ್ಟದ ಅಡಿಕೆಯ ಜೊತೆ ಕೊಳೆತ ಅಡಿಕೆಯನ್ನು ಸೇರಿಸಿ ದೇಶದ ವಿವಿಧ ಭಾಗಗಳಿಗೆ ಪೂರೈಕೆ ಮಾಡುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com