
ಪುಣೆ: ಬೃಹತ್ ಜಾಹಿರಾತು ಫಲಕ ವೊಂದು ಕಬ್ಬಿಣದ ಸರಳುಗಳ ಜೊತೆಗೆ ವಾಹನಗಳ ಮೇಲೆ ಕುಸಿದು ಬಿದ್ದರಿಂದ ಮೂವರು ಮೃತಪಟ್ಟು, ಇತರ ಆರು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ದ ಪುಣೆಯಲ್ಲಿ ಇಂದು ನಡೆದಿದೆ.
40 ಅಡಿ ಎತ್ತರ ಹೋರ್ಡಿಂಗ್ ನ್ನು ಕಬ್ಬಿಣದ ಸರಳುಗಳೊಂದಿಗೆ ಅಳವಡಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆಯ ಹೃದಯ ಭಾಗ ಮಂಗಳವಾರ್ ಪೇಟೆಯ ಶಹಿರ್ ಅಮರ್ ಶೈಕ್ ವೃತ್ತದಲ್ಲಿನ ಸೆಂಟ್ರಲ್ ರೈಲ್ವೆ ಆವರಣದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ರೈಲ್ವೆಯ ಗುತ್ತಿಗೆದಾರರೊಬ್ಬರು ಬೃಹದಾಕಾರದ ಹೋರ್ಡಿಂಗ್ ಅಳವಡಿಸುತ್ತಿದ್ದಾಗ ಆಯಾತಪ್ಪಿ ರಸ್ತೆ ಮೇಲೆ ಕುಸಿದು ಬಿದಿದ್ದೆ.
ಈ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಬರುತ್ತಿದ್ದ ಆಟೋ ರೀಕ್ಷಾ , ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳ ಮೇಲೆ ಬೃಹತ್ ಆದ ಹೋರ್ಡಿಂಗ್ ಕುಸಿದು ಬಿದಿದ್ದೆ ಎಂದು ಉಪ ಪೊಲೀಸ್ ಆಯುಕ್ತ ಬಿ. ಸಿಂಗ್ ಹೇಳಿದ್ದಾರೆ.
ಘಟನೆಯಿಂದಾಗಿ ಮೂವರು ಸಾವನ್ನಪ್ಪಿದ್ದು, ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಮ್ಯಾಮ್ ರಾವ್ ಕಾಸರ್, ಹಾಗೂ ಶ್ಯಾಮ್ ರಾವ್ ದೊತ್ರಿ ಮತ್ತು ಶಿವಾಜಿ ಪರ್ದೇಶಿ ಎಂದು ಗುರುತಿಸಲಾಗಿದೆ.
ಜಾಹೀರಾತು ಅಳವಡಿಕೆಯಲ್ಲಿ ನಿರ್ಲಕ್ಷ್ಯ ಕಂಡುಬಂದಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸಂಬಂಧಿಸಿದ ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಹೋರ್ಡಿಂಗ್ ಅಳವಡಿಸುತ್ತಿದ್ದಾಗ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಘಟನೆಯಿಂದಾಗಿ ಐದು ಆಟೋ ರಿಕ್ಷಾ, ಒಂದು ದ್ವಿಚಕ್ರ ವಾಹನ, ಹಾಗೂ ಒಂದು ನಾಲ್ಕು ಚಕ್ರದ ವಾಹನಗಳಿಗೆ ಹಾನಿಯಾಗಿದೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement