ಅಮೆರಿಕ ನಿರ್ಬಂಧದ ನಂತರವೂ ಇರಾನ್ ನಿಂದ ತೈಲ ಖರೀದಿ ಮುಂದುವರಿಸಲಿದೆ ಭಾರತ

ಇರಾನ್ ಮೇಲೆ ಅಮೆರಿಕ ವಿಧಿಸಿರುವ ಕಠಿಣ ನಿರ್ಬಂಧಗಳು ನವೆಂಬರ್ 4ರಿಂದ ಜಾರಿಗೆ ಬರಲಿದ್ದು, ನಿರ್ಬಂಧಗಳ ಹೊರತಾಗಿಯೂ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಇರಾನ್ ಮೇಲೆ ಅಮೆರಿಕ ವಿಧಿಸಿರುವ ಕಠಿಣ ನಿರ್ಬಂಧಗಳು ನವೆಂಬರ್ 4ರಿಂದ ಜಾರಿಗೆ ಬರಲಿದ್ದು, ನಿರ್ಬಂಧಗಳ ಹೊರತಾಗಿಯೂ ಭಾರತ, ಇರಾನ್ ನಿಂದ ತೈಲ ಖರೀದಿ ಮುಂದುವರೆಸಲಿದೆ.
ಉದ್ಯಮದ ಉನ್ನತ ಮೂಲಗಳ ಪ್ರಕಾರ, ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಒಸಿ) ಮತ್ತು ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್(ಎಂಆರ್ ಪಿಎಲ್) ಈಗಗಾಲೇ ನವೆಂಬರ್ ತಿಂಗಳಲ್ಲಿ ಇರಾನ್ ನಿಂದ 1.25 ಮಿಲಿಯನ್ ಟನ್ ತೈಲ ಖರೀದಿಗೆ ಒಪ್ಪಂದ ಮಾಡಿಕೊಂಡಿವೆ.
ಐಒಸಿ ಎಂದಿನಂತೆ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲಿದೆ. 2018-19ರ ಆರ್ಥಿಕ ವರ್ಷದಲ್ಲಿ ಒಟ್ಟು 9 ಮಿಲಿಯನ್ ಟನ್ ತೈಲ ಆಮದು ಮಾಡಿಕೊಳ್ಳುವ ಯೋಜನೆ ಇದೆ ಎಂದು ಐಒಸಿ ಮೂಲಗಳು ತಿಳಿಸಿವೆ.
ಅಮೆರಿಕ ಇರಾನ್ ಜತೆ ತೈಲ ವ್ಯಾಪಾರ ಒಪ್ಪಂದಕ್ಕೆ ನಿಷೇಧ ಹೇರಿದ್ದರೂ, ಭಾರತ ಮಾತ್ರ ಇರಾನ್ ಜತೆಗೆ ವಾಣಿಜ್ಯ ಮತ್ತು ಹಣಕಾಸು ಸಹಕಾರ, ವ್ಯಾಪಾರ ಮುಂದುವರಿಸಲು ನಿರ್ಧರಿಸಲಿದೆ. 
ಇಚ್ಚೀಗಷ್ಟೇ ತೈಲಕ್ಕಾಗಿ ಇರಾನ್‌ ಅನ್ನು ಅವಲಂಬಿಸಿರುವ ಭಾರತಕ್ಕೆ ಪರ್ಯಾಯ ಪೂರೈಕೆ ಮಾರ್ಗಗಳನ್ನು ಒದಗಿಸುವುದಾಗಿ ಟ್ರಂಪ್ ಆಡಳಿತದ ಅಧಿಕಾರಿಯೊಬ್ಬರು ಹೇಳಿದ್ದಾರೆ.
2015ರಲ್ಲಿ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದ್ದ ಅಮೆರಿಕ, ಅದು ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿ ಈ ವರ್ಷದ ಆರಂಭದಲ್ಲಿ ಮತ್ತೆ ನಿರ್ಬಂಧ ವಿಧಿಸಿತ್ತು.
ನಿರ್ಬಂಧದ ಮೊದಲ ಹಂತ ಈಗಾಗಲೇ ಜಾರಿಯಲ್ಲಿದ್ದು, ಅದು ನವೆಂಬರ್ 4ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ. ಈ ಅವಧಿಯಲ್ಲಿ ಭಾರತ ಸೇರಿದಂತೆ ಎಲ್ಲ ದೇಶಗಳೂ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣ ಸ್ಥಗಿತಗೊಳಿಸಲಿವೆ ಎಂದು ಅಮೆರಿಕ ನಿರೀಕ್ಷಿಸಿದೆ. ಆದರೆ ಭಾರತ ಮಾತ್ರ ಇರಾನ್ ತೈಲ ಆಮದಿಗೆ ಮುಂದುವರೆಸಿದೆ. 
ಇರಾನ್ ಜತೆ ಯಾವುದೇ ರೀತಿಯ ವ್ಯವಹಾರ ಮುಂದುವರಿಸುವ ಯಾವುದೇ ದೇಶವು ತನ್ನ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಯೊಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುವುದು ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com