ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಿದ ಸುಪ್ರೀಂ ಕೋರ್ಟ್ ಆದೇಶ ಕುರಿತು ಚರ್ಚಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದೇಗುಲದ ತಂತ್ರಿ( ಮುಖ್ಯ ಪುರೋಹಿತರು)ಗಳನ್ನು ಭಾನುವಾರ ಮಾತುಕತೆಗೆ ಆಹ್ವಾನಿಸಿದ್ದರು. ಆದರೆ ಮುಖ್ಯಮಂತ್ರಿಯ ಆಹ್ವಾನವನ್ನು ಪುರೋಹಿತರು ನಿರಾಕರಿಸಿದ್ದಾರೆ.
ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಕೇರಳ ಸರ್ಕಾರ ಮೊದಲು ನಿರ್ಧಾರ ತೆಗೆದುಕೊಳ್ಳಲಿ. ನಂತರ ನಾವು ಮಾತನಾಡಲು ಬರುತ್ತೇವೆ ಎಂದು ದೇಗುಲ ಮುಖ್ಯ ತಂತ್ರಿ ಮೋಹಾನಾರು ಕಂದಾರಾರು ಹೇಳಿದ್ದು, ದೇವಸ್ಥಾನ ವಿಚಾರದಲ್ಲಿ ಅವರ ಮಾತನ್ನೇ ಅಂತಿಮ ನಿರ್ಧಾರ ಎಂದು ಪರಿಗಣಿಸಲಾಗಿದೆ.
ಪಿಣರಾಯ್ ವಿಜಯನ್ ಅವರು ಈಗಾಗಲೇ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದರಿಂದ ಅಲ್ಲಿನ ದೈವತ್ವಕ್ಕೆ ಹಾನಿಯಾಗುತ್ತದೆ. ಇಲ್ಲಿನ ಸಂಪ್ರದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಅದಕ್ಕೆ ರಾಜಿಯಾಗಲು ಆಗುವುದಿಲ್ಲ ಎಂದು ಮುಖ್ಯ ತಂತ್ರಿ ಹೇಳಿದ್ದಾರೆ.