ವೀರಪ್ಪನ್ ಹತ್ಯೆಗೆ ಸಹಾಯ ಮಾಡಿದ್ದೆ, ಆದರೆ ನನಗೆ ಬಹುಮಾನ ಎಲ್ಲಿ?; ಚಾತಕ ಪಕ್ಷಿಯಂತೆ ಕಾಯುತ್ತಿರುವ ಷಣ್ಮುಗಪ್ರಿಯ

ಕುಖ್ಯಾತ ಕಾಡುಗಳ್ಳ ವೀರಪ್ಪನ್ ನ್ನು ಕೆ ವಿಜಯ್ ಕುಮಾರ್ ಮತ್ತು ಎನ್ ಕೆ ಸೆಂತಮರೈ ಕನ್ನಣ್ ...
ಕಾಡುಗಳ್ಳ ವೀರಪ್ಪನ್, ಒಳ ಚಿತ್ರದಲ್ಲಿ ಪೊಲೀಸರಿಗೆ ಸಹಾಯ ಮಾಡಿದ ಷಣ್ಮುಗಪ್ರಿಯ
ಕಾಡುಗಳ್ಳ ವೀರಪ್ಪನ್, ಒಳ ಚಿತ್ರದಲ್ಲಿ ಪೊಲೀಸರಿಗೆ ಸಹಾಯ ಮಾಡಿದ ಷಣ್ಮುಗಪ್ರಿಯ

ಕೊಯಂಬತ್ತೂರು: ಕುಖ್ಯಾತ ಕಾಡುಗಳ್ಳ ವೀರಪ್ಪನ್ ನ್ನು ಕೆ ವಿಜಯ್ ಕುಮಾರ್ ಮತ್ತು ಎನ್ ಕೆ ಸೆಂತಮರೈ ಕನ್ನಣ್ ನೇತೃತ್ವದ ವಿಶೇಷ ಕಾರ್ಯಪಡೆ 14 ವರ್ಷಗಳ ಹಿಂದೆ ಗುಂಡಿಕ್ಕಿ ಹತ್ಯೆ ಮಾಡಿದ್ದು ಗೊತ್ತೇ ಇದೆ. ಆತನನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಕೊಯಂಬತ್ತೂರಿನ ಮಹಿಳೆ, ತನಗೆ ಇನ್ನೂ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಕ್ಕೆ ಬಹುಮಾನ ಬಂದಿಲ್ಲ ಎಂದು ಕಾಯುತ್ತಿದ್ದಾರೆ.

ಕೊಯಂಬತ್ತೂರಿನ ವಡವಳ್ಳಿಯ ಎಂ ಷಣ್ಮುಗಪ್ರಿಯ 2004ರಲ್ಲಿ ಆಪರೇಷನ್ ನಾರ್ತನ್ ಸ್ಟಾರ್ ಗೆ ಸೆಂತಮರೈ ಕಣ್ಣನ್ ಅವರಿಂದ ನೇಮಕಗೊಂಡಿದ್ದರು. ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಮೂಲಕ ಕಾಡುಗಳ್ಳ ವೀರಪ್ಪನ್ ನನ್ನು ಹಿಡಿಯಬೇಕೆಂಬ ಕಾರ್ಯಾಚರಣೆಯಾಗಿತ್ತು ಅದು. ವಿಶೇಷ ಕಾರ್ಯಪಡೆಯ ಸತತ ಪ್ರಯತ್ನದಿಂದಾಗಿ ಮುತ್ತುಲಕ್ಷ್ಮಿ ಷಣ್ಮುಗಪ್ರಿಯ ಅವರ ಮನೆಯಲ್ಲಿ ಬಾಡಿಗೆಗೆ ಬಂದು ವಾಸಿಸಲಾರಂಭಿಸಿದಳು.
 
ಅಲ್ಲಿದ್ದ ನಾಲ್ಕು ತಿಂಗಳಲ್ಲಿ ಷಣ್ಮುಗಪ್ರಿಯ ಆಕೆಯ ಜೊತೆ ಸ್ನೇಹ ಬೆಳೆಸಿಕೊಂಡು ವೀರಪ್ಪನ್ ಬಗ್ಗೆ ಪ್ರಮುಖ ಮಾಹಿತಿ ಕಲೆ ಹಾಕಲಾರಂಭಿಸಿದರು. ಅದನ್ನು ವಿಶೇಷ ಕಾರ್ಯಪಡೆಗೆ ತಿಳಿಸುತ್ತಿದ್ದರು. ವೀರಪ್ಪನ್ ನನ್ನು ನೀಲಗಿರಿ ಬಳಿ ಪತ್ನಿಯನ್ನು ಭೇಟಿ ಮಾಡಲು ಬರಲು ಹೇಳುವುದಾಗಿತ್ತು. ಆದರೆ ಅದು ವಿಫಲವಾಗಿತ್ತು.

ವೀರಪ್ಪನ್ ಗೆ ಆರೋಗ್ಯ ಹದಗೆಡುತ್ತಿದೆ, ಕಣ್ಣು ಮಂಜಾಗಿದೆ, ಆತ ಕಾಡಿನಲ್ಲಿ ಎಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ ಇತ್ಯಾದಿ ಮಾಹಿತಿಗಳನ್ನು ಮುತ್ತುಲಕ್ಷ್ಮಿ ಬಳಿಯಿಂದ ಷಣ್ಮುಗಪ್ರಿಯ ಪಡೆದುಕೊಳ್ಳುತ್ತಿದ್ದರು. ವಿಶೇಷ ಕಾರ್ಯಪಡೆಗೆ ಕಾಲಕಾಲಕ್ಕೆ ಮಾಹಿತಿ ನೀಡುತ್ತಿದ್ದರು. ಅದು ಅನುಕೂಲವಾಯಿತು. 2004ರಲ್ಲಿ ವೀರಪ್ಪನ್ ಮತ್ತು ಆತನ ನಾಲ್ವರು ಸಹಚರರನ್ನು ವಿಶೇಷ ಕಾರ್ಯಪಡೆ ಗುಂಡಿಕ್ಕಿ ಹತ್ಯೆ ಮಾಡಿತು. ಈ ಸಂದರ್ಭದಲ್ಲಿ ಸಹಾಯ ಮಾಡಿದ ಷಣ್ಮುಗಪ್ರಿಯ ಅವರಿಗೆ ವಿಶೇಷ ಬಹುಮಾನ ನೀಡುವುದಾಗಿ ಬಾಯಿಮಾತಿನಲ್ಲಿ ಅಧಿಕಾರಿಗಳು ತಿಳಿಸಿದ್ದರು. ಆದರೆ ನನಗೆ ಈ ವರೆಗೆ ಸಿಕ್ಕಿದ್ದು ಬೇಸರ, ನೋವು ಮತ್ತು ಕೆಟ್ಟ ಹೆಸರು ಎನ್ನುತ್ತಾರೆ ಷಣ್ಮುಗಪ್ರಿಯ.

ಸತತ 10 ವರ್ಷ ಕಾದ ಷಣ್ಮುಗಪ್ರಿಯ ಪ್ರಧಾನ ಮಂತ್ರಿಗಳ ದೂರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಅಲ್ಲಿಂದ ಉತ್ತರ ಬಂದಿತ್ತು. ಆದರೆ ಹಲವು ಅರ್ಜಿಗಳನ್ನು ಸಲ್ಲಿಸಿದರೂ ಕೂಡ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಮನವಿ ಹಾಗೆಯೇ ಉಳಿದುಕೊಂಡಿದೆ. ಕುಟುಂಬಕ್ಕೆ ಸ್ನೇಹಿತರಾಗಿರುವ ಪೊಲೀಸ್ ಅಧಿಕಾರಿ ಮೂಲಕ ತಾನು ನೇಮಕಗೊಂಡೆ ಎಂದು ಹೇಳುತ್ತಾರೆ.

ಪೊಲೀಸ್ ಮಹಾ ನಿರ್ದೇಶಕ ಸೆಂತಮರೈ ಕನ್ನನ್ ಷಣ್ಮುಗಪ್ರಿಯ ಅವರ ಪಾತ್ರ ವೀರಪ್ಪನ್ ಹತ್ಯೆಯಲ್ಲಿ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಕೊನೆ ಹಂತದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೆ ಮಾತ್ರ ಬಹುಮಾನ ನೀಡಲಾಗುತ್ತದೆ. ನಾವು ವೀರಪ್ಪನ್ ಹಿಡಿಯಲು ಹಲವು ಕಾರ್ಯಾಚರಣೆ ಮಾಡಿದ್ದರೂ ಅದು ಯಶಸ್ವಿಯಾಗಿರಲಿಲ್ಲ. ಷಣ್ಮುಗಪ್ರಿಯ ಅವರು ಅಂತಹ ಒಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅವರು ಹಲವು ಮಹತ್ತರ ಮಾಹಿತಿಗಳನ್ನು ನೀಡಿದ್ದಾರೆ. ಕೊನೆ ಹಂತದ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಾಮಾನ್ಯ ಜನರಿಗೆ ಮತ್ತು ಅಧಿಕಾರಿಗಳಿಗೆ ಬಹುಮಾನಕ್ಕೆ ನಾವು ಶಿಫಾರಸು ಮಾಡಿದ್ದೇವೆ, ಷಣ್ಮುಗಪ್ರಿಯ ಅವರ ವಿಚಾರದಲ್ಲಿ ಏನೂ ಹೇಳಲಾಗುವುದಿಲ್ಲ ಎನ್ನುತ್ತಾರೆ.

ಡಿಜಿಪಿ ಟಿ ಕೆ ರಾಜೇಂದ್ರನ್ ಪ್ರತಿಕ್ರಿಯೆಗೆ ಸಿಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com