ನಕಲಿ ಎನ್ ಕೌಂಟರ್: ಮೇಜರ್ ಜನರಲ್ ಸೇರಿ 7 ಮಂದಿಗೆ ಜೀವಾವಧಿ ಶಿಕ್ಷೆ

24 ವರ್ಷ ಹಳೆಯ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಜರ್ ಜನರಲ್ ಸಹಿತ 7 ಮಂದಿ ಸೇನಾ ಸಿಬ್ಬಂದಿಯನ್ನು ದೋಷಿ ಎಂದು ತೀರ್ಪು ನೀಡಿರುವ ಸೇನಾ ನ್ಯಾಯಾಲಯ ಎಲ್ಲ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಗುವಾಹತಿ: 24 ವರ್ಷ ಹಳೆಯ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಜರ್ ಜನರಲ್ ಸಹಿತ 7 ಮಂದಿ ಸೇನಾ ಸಿಬ್ಬಂದಿಯನ್ನು ದೋಷಿ ಎಂದು ತೀರ್ಪು ನೀಡಿರುವ ಸೇನಾ ನ್ಯಾಯಾಲಯ ಎಲ್ಲ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ಬಗ್ಗೆ ದಿಬ್ರುಗಢದಲ್ಲಿರುವ ಭಾರತೀಯ ಸೇನಾ ಘಟಕದ ನೆಲೆ ದೃಢಪಡಿಸಿದ್ದು, 1994ರಲ್ಲಿ ಅಸ್ಸಾಂನ ತೀನ್ಸುಕಿಯಾದಲ್ಲಿ ನಡೆದ ನಕಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಅಪರಾಧದಲ್ಲಿ ಮೇಜರ್ ಜನರಲ್ ಎ.ಕೆ. ಲಾಲ್, ಕರ್ನಲ್ ಥಾಮಸ್ ಮ್ಯಾಥ್ಯೂ, ಕರ್ನಲ್ ಆರ್.ಎಸ್. ಸಿಬಿರೆನ್, ಕ್ಯಾಪ್ಟನ್ ದಿಲೀಪ್ ಸಿಂಗ್, ಕ್ಯಾಪ್ಟನ್ ಜಗದೇವ್ ಸಿಂಗ್, ನಾಯಕ್ ಅಲ್ಬಿಂದರ್ ಸಿಂಗ್ ಹಾಗೂ ನಾಯಕ್ ಶಿವೇಂದರ್ ಸಿಂಗ್‌ ಅವರಿಗೆ ಸೇನಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ತಿಳಿದುಬಂದಿದೆ.
ಚಹಾ ತೋಟದ ಕಾರ್ಯನಿರ್ವಹಣಾಧಿಕಾರಿಯ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕೆಯಲ್ಲಿ 1984 ಫೆಬ್ರವರಿ 18ರಂದು ಅಸ್ಸಾಂನ ತೀನ್ಸುಕಿಯಾ ಜಿಲ್ಲೆಯ ವಿವಿಧ ಪ್ರದೇಶದಿಂದ ಸೇನೆ 9 ಮಂದಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಈ ಪೈಕಿ 5 ಮಂದಿಯನ್ನು ಯೋಧರು ನಕಲಿ ಎನ್‌ಕೌಂಟರ್ ನಡೆಸಿ ಹತ್ಯೆಗೈದಿದ್ದರು. ಕೆಲವು ದಿನಗಳ ನಂತರ ಈ ಹತ್ಯೆಯನ್ನು ಉಲ್ಫಾಗಳ ತಲೆಗೆ ಕಟ್ಟಿದ್ದರು. ಅಲ್ಲದೆ ನಾಲ್ವರನ್ನು ಬಿಡುಗಡೆ ಮಾಡಿದ್ದರು. ಈ ಪ್ರಕರಣ ದಿನಗಳೆದಂತೆ ಅನುಮಾನ ಹೆಚ್ಚಾದ ಹಿನ್ನಲೆಯಲ್ಲಿ ಸೇನಾ ನ್ಯಾಯಾಲಯದಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.
ಇದೀಗ ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯ ತನ್ನ ಅಂತಿಮ ತೀರ್ಪು ನೀಡಿದೆ ಎಂದು ಅಸ್ಸಾಂನ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಜಗದೀಶ್ ಭುಯಾನ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com