ತೀವ್ರ ಗದ್ದಲದ ನಡುವೆಯೂ ಮಹಿಳಾ ಪ್ರವೇಶವಿಲ್ಲದೆ ಶಬರಿಮಲೆ 6 ದಿನಗಳ ದರ್ಶನ ಮುಕ್ತಾಯ

5 ದಿನಗಳ ಅಯ್ಯಪ್ಪಸ್ವಾಮಿ ಮಾಸಿಕ ಪೂಜೆ ಸೋಮವಾರ ಅಂತ್ಯಗೊಂಡಿದ್ದು, ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ನಡೆಯಬೇಕಿದ್ದ ಮಹಿಳಾ ಪ್ರವೇಶಕ್ಕೆ ಕಡೆಯ ದಿನವೂ ಭಕ್ತಗಣ ತಡೆಯೊಡ್ಡಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: 5 ದಿನಗಳ ಅಯ್ಯಪ್ಪಸ್ವಾಮಿ ಮಾಸಿಕ ಪೂಜೆ ಸೋಮವಾರ ಅಂತ್ಯಗೊಂಡಿದ್ದು, ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ನಡೆಯಬೇಕಿದ್ದ ಮಹಿಳಾ ಪ್ರವೇಶಕ್ಕೆ ಕಡೆಯ ದಿನವೂ ಭಕ್ತಗಣ ತಡೆಯೊಡ್ಡಿದ್ದಾರೆ. 
ಈ ಮೂಲಕ ದೇಗುಲ ತೆರೆದಿದ್ದ 6 ದಿನಗಳ ಅವಧಿಯಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಹೊರತಾಗಿಯೂ 10-50 ವರ್ಷ ವಯೋಮಾನದ ವಯಸ್ಸಿನ ಯಾವುದೇ ಮಹಿಳೆಯು ಸನ್ನಿಧಾನ ಪ್ರವೇಶಿಸಲು ವಿಫಲಗೊಂಡಿದ್ದು, ಸದ್ಯದ ಮಟ್ಟಿಗೆ ವಿವಾದಕ್ಕೆ ಅಲ್ಪ ವಿರಾಮ ಬಿದ್ಧಂತಾಗಿದೆ. 
ಸಂಪ್ರದಾಯದ ಪ್ರಕಾರ ದೇವಾಲಯದ ಬಾಗಿಲನ್ನು 6 ದಿನಗಳ ಮಾಸಿಕ ದರ್ಶನದ ಬಳಿಕ ನಿನ್ನೆ ರಾತ್ರಿ 10 ಗಂಟೆಗೆ ಬಂದ್ ಮಾಡಲಾಯಿತು. ಮತ್ತೆ ದೇವಾಲಯವು ನವೆಂಬರ್ 5 ಮತ್ತು 6 ರಂದು 2 ದಿನದ ಮಟ್ಟಿಗೆ ತೆರೆಯಲಿದ್ದು, ಅಂದಾದರೂ ಮಹಿಳೆಯರ ಪ್ರವೇಶ ಸಾಧ್ಯವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. 
ಈ ನಡುವೆ ಮತ್ತೊಂದು ವಿಚಾರ ಎಲ್ಲರ ಚಿತ್ತ ಸುಪ್ರೀಂಕೋರ್ಟ್ ನತ್ತ ಹರಿಯುವಂತೆ ಮಾಡಿದೆ. ದೇವಾಲಯಕ್ಕೆ ಮಹಿಳೆಯರ ಪ್ರವೇಶ ಅವಕಾಶ ನೀಡಿರುವುದನ್ನು ಸಲ್ಲಿಸಲಾಗಿರುವ ಮರುಪರಿಶೀಲನಾ ಅರ್ಜಿಗಳ ವಿಚಾರಣಾ ದಿನಾಂಕವನ್ನು ಸರ್ವೋಚ್ಛ ನ್ಯಾಯಾಲಯ ಇಂದು ನಿರ್ಧರಿಸಲಿದೆ. 
ಮುಖ್ಯ ನ್ಯಾಯಾಧೀಶ ನ್ಯಾ.ರಂಜನ್ ಗೊಗೋಯ್, ನ್ಯಾ.ಸಂಜಯ್ ಕಿಶನ್ ಕೌಲ್ ಅವರ ಪೀಠವು ಸೋಮವಾರ ತಮ್ಮೆದುರು ಹಾಜರಾದ ಅರ್ಜಿದಾರರ ಪರ ವಕೀಲ ಮ್ಯಾಥ್ಯೂಸ್ ನೆಡುಂಪಾರ ಅವರಿಗೆ ಈ ಭರವಸೆ ನೀಡಿತು. 
ನಮ್ಮೆದುರು 19 ಅರ್ಜಿಗಳಿವೆ ಎಂಬುದು ಗೊತ್ತು. ಮಂಗಳವಾರದ ವೇಳೆಗೆ ವಿಚಾರಣಾ ದಿನಾಂಕವನ್ನು ನಿಗದಿಪಡಿಸುತ್ತೇವೆಂದು ನ್ಯಾಯಾಧೀಶರು ಹೇಳಿದ್ದಾರೆ. 
ನೆಡುಂಪಾರ ಅವರು ಅಯ್ಯಪ್ಪ ಭಕ್ತರ ಸಮಿತಿಯ ವಕೀಲರು. ಇದಕ್ಕೂ ಮುನ್ನ ದಸರಾ ರಜೆಗೂ ಮುನ್ನ ವಿಚಾರಣೆ ನಡೆಸಿದ್ದ ಇದೇ ಪೀಠವು, ತನ್ನದೇ ತೀರ್ಪಿಗೆ ತಡೆ ನೀಡಲು ನಿರಾಕರಿಸಿ, ರಜೆ ನಂತರ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. 
ಮಹಿಳೆಯರ ಪ್ರವೇಶ ಕುರಿತು ಇಂದು ದೇವಾಲಯ ನಿಲುವು 
ಶಬರಿಮಲೆ ದೇವಾಲಯದಲ್ಲಿ ನಿರ್ದಿಷ್ಟ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವುದು ಭಾರಿ ಪ್ರತಿಭಟನೆಗೆ ಕಾರಣವಾಗಿರುವ ಹಿನ್ನಲೆಯಲ್ಲಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತಿರ್ವಾಂಕೂರ್ ದೇವಸ್ವ ಮಂಡಳಿ ಇಂದು ಸಭೆ ನಡೆಸಲಿದೆ. 
ಭಕ್ತರ ನಂಬಿಕೆ ಮತ್ತು ಸಂಪ್ರದಾಯವನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವ ಮರ ಪರಿಶೀಲನಾ ಅರ್ಜಿಯು ವಿಚಾರಣೆಯ ವೇಳೆ ಯಾವ ನಿಲುವು ಕೈಗೊಳ್ಳಬೇಕು ಎಂಬ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಕಾನೂನು ತಜ್ಞರ ಜೊತೆಗೂ ಚರ್ಚೆ ನಡೆಸಲಾಗುತ್ತಿದೆ ಎಂದು ದೇವಸ್ವ ಮಂಡಳಿಯ ಮುಖ್ಯಸ್ಥ ಎ.ಪದ್ಮಕುಮಾರ್ ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com