ಬಿಹಾರ: ಐಸಿಯುನಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು-ಕುಟುಂಬ ಸದಸ್ಯರ ಆರೋಪ
ದೇಶ
ಬಿಹಾರ: ಐಸಿಯುನಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು-ಕುಟುಂಬ ಸದಸ್ಯರ ಆರೋಪ
ಸರ್ಕಾರಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ದಿನಗಳ ಶಿಶು ಇಲಿ ಕಚ್ಚಿರುವುದರಿಂದ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಪಾಟ್ನಾ: ಸರ್ಕಾರಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ದಿನಗಳ ಶಿಶು ಇಲಿ ಕಚ್ಚಿರುವುದರಿಂದ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಕುಟುಂಬ ಸದಸ್ಯರು ಇಲಿ ಕಚ್ಚಿರುವುದರಿಂದಲೇ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ. ಆದರೆ ಆಸ್ಪತ್ರೆಯ ಸಿಬ್ಬಂದಿಗಳು ಇದನ್ನು ನಿರಾಕರಿಸುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ.
ಅನಾರೋಗ್ಯಕ್ಕೊಳಗಾಗಿದ್ದ ಶಿಶುವನ್ನು ದರ್ಬಂಗ್ ವೈದ್ಯಕೀಯ ಕಾಲೇಜಿನ ಎನ್ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈ ವೇಳೆ ಎನ್ಐಸಿಯು ನಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಇಲಿ ಕಚ್ಚಿ ಸಾವನ್ನಪ್ಪಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಎನ್ಐಸಿಯುಗೆ ಹೋಗಿದ್ದಾಗ ಮಗುವಿನ ಕೈ ಕಾಲುಗಳನ್ನು ತಿನ್ನಲು ಯತ್ನಿಸುತ್ತಿದ್ದವು, ಯವುದೇ ದಾದಿಯರು ಡ್ಯೂಟಿ ಡಾಕ್ಟರ್ ಗಳು ಇರಲಿಲ್ಲ. ತಕ್ಷಣವೇ ಆಸ್ಪತ್ರೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಆದರೆ ಅವರು ಆ ವೇಳೆಗಾಗಲೇ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾಗಿ ಮಗುವಿನ ತಂದೆ ಪುರಾಣ್ ಚೌಪಾಲ್ ಹೇಳಿದ್ದಾರೆ.
ಆದರೆ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾಗಿರುವ ಕೆಎನ್ ಮಿಶ್ರಾ ಪೋಷಕರ ಆರೋಪವನ್ನು ನಿರಾಕರಿಸಿದ್ದು, ಮಗುವನ್ನು ಗಂಭೀರ ಸ್ಥಿತಿಯಲ್ಲಿದ್ದಾಗ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಯಿತು. ಆದರೆ ಇಲಿ ಕಚ್ಚಿರುವುದರ ಬಗ್ಗೆ ಯಾವುದೇ ಗುರುತುಗಳಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ