ನನ್ನ ಪತ್ನಿ ಮಾಡಿರುವ ಹೂಡಿಕೆಯಲ್ಲಿ ಯಾವುದೇ ಅಕ್ರಮವಿಲ್ಲ: ಸಿಬಿಐ ಹಂಗಾಮಿ ನಿರ್ದೇಶಕ ನಾಗೇಶ್ವರ್ ರಾವ್
ನವದೆಹಲಿ: ಖಾಸಗಿ ಕಂಪೆನಿಯಲ್ಲಿ ತಮ್ಮ ಪತ್ನಿ ಮಾಡಿರುವ ಹೂಡಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಕೇಂದ್ರ ತನಿಖಾ ಸಂಸ್ಥೆ ಸಿಬಿಐಯ ಹಂಗಾಮಿ ಮುಖ್ಯಸ್ಥ ಎಂ ನಾಗೇಶ್ವರ್ ರಾವ್ ತಿಳಿಸಿದ್ದಾರೆ.
ಈ ಕುರಿತು ಸಹಿ ಮಾಡಿದ ಹೇಳಿಕೆಯಲ್ಲಿ ಅವರು, ತಮ್ಮ ಮತ್ತು ತಮ್ಮ ಪತ್ನಿ ಮನ್ನೆಮ್ ಸಂಧ್ಯಾ ಮಾಡಿರುವ ಎಲ್ಲಾ ಹೂಡಿಕೆ ಮತ್ತು ವ್ಯವಹಾರಗಳನ್ನು ಸಮರ್ಥ ಅಧಿಕಾರಿಗಳಿಗೆ ನೀಡಿದ್ದು ಸರ್ಕಾರಕ್ಕೆ ಸಲ್ಲಿಸುವ ವಾರ್ಷಿಕ ಆದಾಯ ತೆರಿಗೆ ವಿವರಗಳಲ್ಲಿ ನಮೂದಿಸಿರುವುದಾಗಿ ಹೇಳಿದ್ದಾರೆ.
ತಮ್ಮ ಹಾಗೂ ತಮ್ಮ ಪತ್ನಿಯ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನೀಡಿದ ಅವರು, ತಮ್ಮ ಪತ್ನಿ ಅಂಜೆಲಾ ಮರ್ಕಂಟೈಲ್ ಪ್ರೈ ಲಿಮಿಟೆಡ್ ನಿಂದ 25 ಲಕ್ಷ ಸಾಲ ತೆಗೆದುಕೊಂಡಿದ್ದರು. ಅದು ನಮ್ಮ ದೀರ್ಘಕಾಲದ ಸ್ನೇಹಿತ ಪ್ರವೀಣ್ ಅಗರ್ವಾಲ್ ಅವರಿಂದ ಆಂಧ್ರ ಪ್ರದೇಶದ ಗುಂಟೂರು ಬಳಿ ಆಸ್ತಿಯನ್ನು ಖರೀದಿಸಲು ಎಂದಿದ್ದಾರೆ.
ಯಾವುದೇ ಯೋಜನೆಗಳ ನಿರ್ಧಾರವನ್ನು ತೆಗೆದುಕೊಳ್ಳದಂತೆ ಮತ್ತು ಅವರು ಮಾಡಿರುವ ಆಡಳಿತಾತ್ಮಕ ನಿರ್ಧಾರಗಳನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ತಡೆ ನೀಡಿದ ನಂತರ ಸಿಬಿಐ ಹಂಗಾಮಿ ನಿರ್ದೇಶಕರಾಗಿ ರಾವ್ ಅವರ ಅಧಿಕಾರ ಹಠಾತ್ತಾಗಿ ನಿಂತಿದೆ.
ಭ್ರಷ್ಟಾಚಾರ ಕೇಸಿಗೆ ಸಂಬಂಧಪಟ್ಟಂತೆ ತನಿಖೆ ಎದುರಿಸುತ್ತಿದ್ದ ಸಿಬಿಐ ಉನ್ನತ ಅಧಿಕಾರಿಗಳಾದ ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ತಾನಾ ಅವರನ್ನು ಬೇರೆಡೆಗೆ ವರ್ಗಾಯಿಸಿದ ನಂತರ ಕಳೆದ ವಾರ ಕೇಂದ್ರ ಸರ್ಕಾರ ನಾಗೇಶ್ವರ ರಾವ್ ಅವರನ್ನು ಸಿಬಿಐಯ ಹಂಗಾಮಿ ನಿರ್ದೇಶಕರಾಗಿ ನೇಮಿಸಿತ್ತು.
ತಮ್ಮ ಪತ್ನಿ ಗುಂಟೂರು ಬಳಿ ಅವರ ಸಂಬಂಧಿಕರ ಜೊತೆ ಸೇರಿಕೊಂಡು 2010ರ ಸೆಪ್ಟೆಂಬರ್ 18ರಂದು ಆಸ್ತಿ ಖರೀದಿಸಿದ್ದರು. ನಂತರ ಒಂದು ವರ್ಷ ಕಳೆದ ಮೇಲೆ ಆಕೆಯ ಪಿತ್ರಾರ್ಜಿತ ಕೃಷಿ ಭೂಮಿಯಲ್ಲಿ ಒಂದು ಭಾಗವನ್ನು 30.72 ಲಕ್ಷಕ್ಕೆ ಮಾರಾಟ ಮಾಡಿದ್ದರು. ಮತ್ತೆ ಎರಡು ತಿಂಗಳು ಕಳೆದ ನಂತರ ಮತ್ತೆ ಸ್ವಲ್ಪ ಜಮೀನನ್ನು 27.90 ಲಕ್ಷ ರೂಪಾಯಿಗೆ ಮಾರಾಟ ಮಾಡಿದರು. ಹೀಗೆ ಒಟ್ಟು 58.62 ಲಕ್ಷ ರೂಪಾಯಿ ಜಮೀನು ಮಾರಾಟದಿಂದ ಸಿಕ್ಕಿತು. 2011ರಲ್ಲಿ ವೈಯಕ್ತಿಕವಾಗಿ ಇದ್ದ 1.38 ಲಕ್ಷ ರೂಪಾಯಿ ಜೊತೆಗೆ ಒಟ್ಟು 60 ಲಕ್ಷ ರೂಪಾಯಿಗಳನ್ನು ಅಂಜೆಲಾ ಮರ್ಕಂಟೈಲ್ ಪ್ರೈವೆಟ್ ಲಿಮಿಟೆಡ್ ಗೆ ಕಳುಹಿಸಿದರು. ಅಲ್ಲಿ ಸಾಲದ ಮೊತ್ತ ಕಡಿತವಾಗಿ ಉಳಿದ 35 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಲಾಯಿತು ಎಂದು ರಾವ್ ವಿವರಿಸಿದ್ದಾರೆ.
2014ರಲ್ಲಿ ಹೂಡಿಕೆ ಮಾಡಿದ 3 ವರ್ಷಗಳ ನಂತರ ಅಂಜೆಲಾ ಮರ್ಕಂಟೈಲ್ 41.33 ಲಕ್ಷ ರೂಪಾಯಿಗಳನ್ನು ಹಿಂತಿರುಗಿಸಿದ್ದು ಅದರಲ್ಲಿ 6.33 ಲಕ್ಷ ಬಡ್ಡಿ ಕೂಡ ಸೇರ್ಪಡೆಯಾಗಿದೆ. ಈ ಬಗ್ಗೆ ಕಾಲಕಾಲಕ್ಕೆ ನಾನು ಮತ್ತು ನನ್ನ ಕುಟುಂಬ ಮಾಡಿರುವ ವ್ಯವಹಾರಗಳ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಅದು ಗೃಹ ವ್ಯವಹಾರಗಳ ಸಚಿವಾಲಯದ ವೆಬ್ ಸೈಟ್ ನಲ್ಲಿ ಕೂಡ ದೊರೆಯುತ್ತದೆ. ನನ್ನ ವಿರುದ್ಧದ ಎಲ್ಲಾ ಆರೋಪಗಳು ಅಸತ್ಯವಾಗಿದೆ ಎಂದರು.
ನವೆಂಬರ್ 12ರವರೆಗೆ ಯಾವುದೇ ಯೋಜನೆಗೆ ಸಂಬಂಧಪಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ನಾಗೇಶ್ವರ್ ರಾವ್ ಗೆ ಸೂಚಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ