ತೆಲಂಗಾಣ ವಿಧಾನಸಭೆ ವಿಸರ್ಜಿಸಲು ಸಿಎಂ ಕೆಸಿಆರ್​ ಚಿಂತನೆ; ಮಧ್ಯಾಹ್ನ ಮಹತ್ವದ ಘೋಷಣೆ

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್​ ಅವರು ಅವಧಿಗೂ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸಿ ಅವಧಿ ಪೂರ್ವ ಚುನಾವಣೆಗೆ ಹೋಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹೈದರಾಬಾದ್​: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್​ ಅವರು ಅವಧಿಗೂ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸಿ ಅವಧಿ ಪೂರ್ವ ಚುನಾವಣೆಗೆ ಹೋಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಹೊಸದಾಗಿ ರಾಜ್ಯ ರಚನೆಯಾದ ನಂತರ 2013ರಲ್ಲಿ ಲೋಕಸಭೆ ಜತೆಗೇ ತೆಲಂಗಾಣ ವಿಧಾನಸಭೆಗೂ ಚುನಾವಣೆ ನಡೆದಿತ್ತು. ತೆಲಂಗಾಣ ಮೊದಲ ವಿಧಾನಸಭೆಯ ಅವಧಿ 2019ರ ಏಪ್ರಿಲ್​-ಮೇ ವರೆಗೆ ಇದೆಯಾದರೂ, ಇದೇ ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಅದರ ಜತೆಗೇ ಚುನಾವಣೆ ಎದುರಿಸಲು ಕೆಸಿಆರ್​ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಕೆಸಿಆರ್ ಇಂದು ಮಧ್ಯಾಹ್ನದ ಹೊತ್ತಿಗೆ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.
ಇಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ವತಿಯಿಂದ ‘ಪ್ರಗತಿ ನಿವೇದನಾ ಸಭಾ’ ಎಂಬ ಸಮಾವೇಶ ಆಯೋಜನೆಗೊಂಡಿದ್ದು, ಅಲ್ಲಿ ಕೆಸಿಆರ್​ ಅವರು ತಮ್ಮ ತೀರ್ಮಾನ ಪ್ರಕಟಿಸುವ ಸಾಧ್ಯತೆಗಳಿವೆ. ಪ್ರಗತಿ ನಿವೇದನಾ ಸಭೆಗಾಗಿ ಈಗಾಗಲೇ ರಂಗಾ ರೆಡ್ಡಿ ಜಿಲ್ಲೆಯಲ್ಲಿ 2000 ಎಕರೆ ಪ್ರದೇಶವನ್ನು ಗುರುತಿಸಿ ಸಜ್ಜುಗೊಳಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಚಂದ್ರಶೇಖರ ರಾವ್ ಅವರ ಪುತ್ರ ಹಾಗೂ ಸಚಿವ ಕೆ.ಟಿ ರಾಮಾರಾವ್​ ಅವರು, 'ಮುಖ್ಯಮಂತ್ರಿ ಕೆಸಿಆರ್​ ಅವರಿಂದ ಪ್ರಮುಖ ರಾಜಕೀಯ ತೀರ್ಮಾನವೊಂದನ್ನು ನೀವು ನಾಳೆ ನಿರೀಕ್ಷೆ ಮಾಡಬಹುದು. ನಾಳಿನ ಸಭೆಯ ನಂತರ ರಾಜ್ಯದ ರಾಜಕೀಯ ಕಾವೇರಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಆದರೆ, ವಿಧಾನಸಭೆಯನ್ನು ವಿಸರ್ಜಿಸುವ ಕುರಿತ ಪ್ರಶ್ನೆಗೆ ಅವರಿಂದ ಸೂಕ್ತ ಉತ್ತರ ಸಿಕ್ಕಿಲ್ಲ. ತೆಲಂಗಾಣ ರಾಜ್ಯ ರಚನೆಯಾಗಿ ಸೆಪ್ಟೆಂಬರ್​ 2 ನಾಲ್ಕು ವರ್ಷಗಳು ಪೂರೈಸಲಿವೆ. ಈ ದಿನದಂದು ಪ್ರಗತಿ ನಿವೇದನಾ ಸಮಾವೇಶ ಆಯೋಜಿಸಿರುವ ಕೆಸಿಆರ್​, ಅಲ್ಲಿ ತಮ್ಮ ನಾಲ್ಕು ವರ್ಷಗಳ ಸಾಧನೆಯನ್ನು ಜನರ ಮುಂದಿಡಲು ತೀರ್ಮಾನಿಸಿದ್ದಾರೆ. ಅಲ್ಲದೆ, ಸಮಾವೇಶದ ಮೂಲಕವೇ ಚುನಾವಣೆಗೆ ರಣಕಹಳೆ ಮೊಳಗಿಸಲು ಅವರು ಉದ್ದೇಶಿಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com