ಆಕೆ ನನ್ನ ಮೇಲಧಿಕಾರಿ, ಆಕೆಯನ್ನು ಕಂಡೊಡನೇ ಸೆಲ್ಯೂಟ್ ಮಾಡಿದೆ: ಮಗಳ ಬಗ್ಗೆ ತಂದೆಯ ಹೆಮ್ಮೆ ಮಾತುಗಳು!

ಮಕ್ಕಳು ಓದಿ ಒಳ್ಳೆಯ ಕೆಲಸಕ್ಕೆ ಸೇರಿ ಪ್ರಯೋಜಕರಾಗಬೇಕೆಂಬುದು ಎಲ್ಲರ ತಂದೆ-ತಾಯಂದಿರ ಹೆಬ್ಬಯಕೆಯಾಗಿರುತ್ತದೆ. ಅಂತೆ ಮಕ್ಕಳೇ ತಮ್ಮ ಮೇಲಧಿಕಾರಿಯಾಗಿ ಬಂದರೆ ಅಂತಹ...
ಸಿಂಧು-ಉಮಾಮಹೇಶ್ವರ
ಸಿಂಧು-ಉಮಾಮಹೇಶ್ವರ
ಹೈದರಬಾದ್: ಮಕ್ಕಳು ಓದಿ ಒಳ್ಳೆಯ ಕೆಲಸಕ್ಕೆ ಸೇರಿ ಪ್ರಯೋಜಕರಾಗಬೇಕೆಂಬುದು ಎಲ್ಲರ ತಂದೆ-ತಾಯಂದಿರ ಹೆಬ್ಬಯಕೆಯಾಗಿರುತ್ತದೆ. ಅಂತೆ ಮಕ್ಕಳೇ ತಮ್ಮ ಮೇಲಧಿಕಾರಿಯಾಗಿ ಬಂದರೆ ಅಂತಹ ಪೋಷಕರ ಖುಷಿಗೆ ಪಾರವೆ ಇರುವುದಿಲ್ಲ. 
ಹೈದರಾಬಾದ್ ನಲ್ಲಿ ಮೂರು ದಶಕಗಳಿಂದ ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿರುವ ಉಪ ಪೊಲೀಸ್ ಆಯುಕ್ತ ಎಆರ್ ಉಮಾಮಹೇಶ್ವರ ಶರ್ಮಾ ಅವರು ಜಗ್ತಿಯಾಳ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಿಂಧು ಶರ್ಮಾ ಅವರನ್ನು ಮುಖಾಮುಖಿ ಭೇಟಿಯಾದಾಗ ತನ್ನ ಮೇಲಧಿಕಾರಿಯಾಗಿರುವ ಪುತ್ರಿ ಸಿಂಧು ಶರ್ಮಾಗೆ ಹೆಮ್ಮೆಯಿಂದ ಸೆಲ್ಯೂಟ್ ಮಾಡಿದ್ದಾರೆ. 
ಉಮಾಮಹೇಶ್ವರ ಶರ್ಮಾ ಅವರು ಮಾಲ್ಕಾಜ್ಗಿರಿ ಪ್ರದೇಶದ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪುತ್ರಿ ಸಿಂಧು ಶರ್ಮಾ ಅವರು 2014ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. 
ಹೈದರಾಬಾದ್ ನಲ್ಲಿ ನಡೆದ ಟಿಆರ್ಎಸ್ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಕಾರ್ಯನಿಮಿತ್ತ ತಂದೆ ಮಗಳು ಮುಖಾಮುಖಿಯಾಗಿದ್ದರು. ಇದು ತಮ್ಮ ಸೇವಾ ಅವಧಿಯಲ್ಲಿ ಇಬ್ಬರು ಮೊದಲ ಬಾರಿಗೆ ಮುಖಾಮುಖಿಯಾಗಿದ್ದು ಆಕೆ ಜತೆ ಕೆಲಸ ಮಾಡಲು ಖುಷಿಯಾಯಿತು ಎಂದು ಉಮಾಮಹೇಶ್ವರ ಅವರು ಹೇಳಿದ್ದಾರೆ. 
ಆಕೆ ನನ್ನ ಮೇಲಧಿಕಾರಿ. ಆಕೆಯನ್ನು ನಾನು ಕಂಡೊಡನೆ ಸೆಲ್ಯೂಟ್ ಮಾಡಿದೆ. ಕರ್ತವ್ಯ ಸಂಬಂಧ ನಾನು ಸೆಲ್ಯೂಟ್ ಮಾಡಿದೆ. ಆ ಬಗ್ಗೆ ನಾವು ಚರ್ಚಿಸುವುದಿಲ್ಲ. ಮನೆಯಲ್ಲಿ ಮಾತ್ರ ತಂದೆ ಮಗಳು. ಇನ್ನು ಮಗಳಿಗೆ ಸೆಲ್ಯೂಟ್ ಮಾಡುವುದು ತಂದೆಯಾದ ನನಗೆ ಹೆಮ್ಮೆಯ ವಿಷಯ ಎಂದು ಉಮಾಮಹೇಶ್ವರ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com