ತೆಲಂಗಾಣ ವಿಧಾನಸಭೆ ವಿಸರ್ಜನೆ, ಹಂಗಾಮಿ ಸಿಎಂ ಆಗಿ ಕೆಸಿಆರ್ ಮುಂದುವರಿಕೆ

ನಿರೀಕ್ಷೆಯಂತೆಯೇ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರು ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆಗೆ ತೆರಳಲು ನಿರ್ಧರಿಸಿದ್ದು, ಈ ಸಂಬಂಧ ಇಂದು ನಡೆದ ಸಂಪುಟ ಸಭೆಯಲ್ಲಿ ವಿಧಾನಸಭೆ ವಿಸರ್ಜನೆಗೆ ನಿರ್ಣಯ ಕೈಗೊಳ್ಳಲಾಗಿದೆ.
ಸಂಪುಟ ನಿರ್ಣಯ ಪ್ರತಿ ರಾಜ್ಯಪಾಲರಿಗೆ ಸಲ್ಲಿಸುತ್ತಿರುವ ಕೆಸಿಆರ್
ಸಂಪುಟ ನಿರ್ಣಯ ಪ್ರತಿ ರಾಜ್ಯಪಾಲರಿಗೆ ಸಲ್ಲಿಸುತ್ತಿರುವ ಕೆಸಿಆರ್
ಹೈದರಾಬಾದ್: ನಿರೀಕ್ಷೆಯಂತೆಯೇ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆಗೆ ತೆರಳಲು ನಿರ್ಧರಿಸಿದ್ದು, ಈ ಸಂಬಂಧ ಗುರುವಾರ ನಡೆದ ಸಂಪುಟ ಸಭೆಯಲ್ಲಿ ವಿಧಾನಸಭೆ ವಿಸರ್ಜನೆಗೆ ನಿರ್ಣಯ ಕೈಗೊಳ್ಳಲಾಗಿದೆ.
ಇಂದು ಬೆಳಗ್ಗೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಕೆಸಿಆರ್ ನಿರ್ಣಯಕ್ಕೆ ಸಂಪುಟ ಸಭೆಯಲ್ಲಿ ಅವಿರೋಧ ಒಪ್ಪಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಬಳಿಕ ಸಿಎಂ ಕೆಸಿಆರ್ ಅವರು ರಾಜಭವನಕ್ಕೆ ತೆರಳಿ ಅಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ವಿಧಾನಸಭೆ ವಿಸರ್ಜಿಸುವ ಸಂಪುಟ ನಿರ್ಣಯದ ಪ್ರತಿಯನ್ನು ಸಲ್ಲಿಸಿದರು. ನಿರ್ಣಯವನ್ನು ರಾಜ್ಯಪಾಲರು ಅಂಗೀಕರಿಸಿದ್ದು, ನೂತನ ಸರ್ಕಾರ ರಚನೆಯಾಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಕೆಸಿಆರ್ ಅವರಿಗೆ ಸೂಚಿಸಿದ್ದಾರೆ.
ಹೊಸದಾಗಿ ರಾಜ್ಯ ರಚನೆಯಾದ ನಂತರ 2013ರಲ್ಲಿ ಲೋಕಸಭೆ ಜತೆಗೇ ತೆಲಂಗಾಣ ವಿಧಾನಸಭೆಗೂ ಚುನಾವಣೆ ನಡೆದಿತ್ತು. ತೆಲಂಗಾಣ ಮೊದಲ ವಿಧಾನಸಭೆಯ ಅವಧಿ 2019ರ ಏಪ್ರಿಲ್​-ಮೇ ವರೆಗೆ ಇದೆಯಾದರೂ, ಇದೇ ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಅದರ ಜತೆಗೇ ಚುನಾವಣೆ ಎದುರಿಸಲು ಕೆಸಿಆರ್​ ತೀರ್ಮಾನಿಸಿದ್ದಾರೆ. 
ಚುನಾವಣೆಗೆ ಪೂರ್ವಭಾವಿ ಸಿದ್ಧತೆ ಎಂಬಂತೆ ಟಿಆರ್ ಎಸ್ ಸರ್ಕಾರ ಇತ್ತೀಚೆಗಷ್ಟೇ ನೌಕರರು, ಕಾರ್ಮಿಕರು ಹಾಗೂ ರೈತರಿಗೆ ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com