
ನವದೆಹಲಿ: ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಪಾಕಿಸ್ತಾನ ಭಾರತದ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಬಗ್ಗೆ ಎಚ್ಚರಿಸಿತ್ತು. ಈ ಬೆನ್ನಲ್ಲೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ಹಪಹಪಿಸುತ್ತಿರುವ ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ 12 ಕ್ಕೂ ಹೆಚ್ಚು ಉಗ್ರ ಕ್ಯಾಂಪ್ ಗಳನ್ನು ಸಕ್ರಿಯಗೊಳಿಸಿರುವ ಮಾಹಿತಿ ಲಭ್ಯವಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಗಡಿ ಬಳಿ ಇರುವ ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ಪಾಕಿಸ್ತಾನ ಉಗ್ರರ ನೆಲೆಗಳನ್ನು ಸಕ್ರಿಯಗೊಳಿಸಿದೆ. ಕಳೆದ ವಾರ ಈ ಪ್ರದೇಶಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಉಗ್ರರ ಚಲನವಲನಗಳು ದಾಖಲಾಗಿವೆ. ಆರ್ಟಿಕಲ್ 370 ರದ್ದತಿ ಬೆನ್ನಲ್ಲೇ ಪಾಕಿಸ್ತಾನ ಸಂಸತ್ ನಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ಭಾರತದಲ್ಲಿ ಪುಲ್ವಾಮ ಮಾದರಿಯ ಮತ್ತೊಂದು ದಾಳಿ ನಡೆದರೆ ಅದಕ್ಕೆ ಪಾಕಿಸ್ತಾನ ಹೊಣೆಯಾಗುವುದಿಲ್ಲ ಎಂದು ಹೇಳಿದ್ದರು. ಇಮ್ರಾನ್ ಖಾನ್ ಅವರ ಈ ಹೇಳಿಕೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಲಷ್ಕರ್-ಎ-ತೊಯ್ಬಾ ರೀತಿಯ ಉಗ್ರ ಸಂಘಟನೆಗಳಿಗೆ ಉಗ್ರ ಕೃತ್ಯ ನಡೆಸಲು ಮತ್ತಷ್ಟು ಉತ್ತೇಜನ ನೀಡಿದಂತಾಗಿದ್ದು, ಉಗ್ರ ಸಂಘಟನೆಗಳು ಪಿಒಕೆ ಬಳಿಯ ಲಾಂಚ್ ಪ್ಯಾಡ್ ಗಳನ್ನು ಸಕ್ರಿಯಗೊಳಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.
ತಾಲೀಬಾನ್, ಜೈಶ್, ಲಷ್ಕರ್ ಉಗ್ರ ಸಂಘಟನೆಗಳ ಒಟ್ಟು 150 ಜನ ಇರುವ 12 ಕ್ಕೂ ಹೆಚ್ಚು ತಂಡ ಭಾರತದ ಮೇಲೆ ದಾಳಿಗೆ ಸಜ್ಜಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಉಗ್ರರು ದಾಳಿ ನಡೆಸುವ ಸಾಧ್ಯತೆ ಹೆಚ್ಚಿರುವುದರಿಂದ ಎನ್ಎಸ್ಎ ಅಜಿತ್ ದೋವಲ್ ಸ್ವತಃ ಕಾಶ್ಮೀರಕ್ಕೆ ತೆರಳಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ.
Advertisement