ಬಿಜೆಪಿ ಶಾಸಕ ಸಂಗೀತ್ ಸೋಮ್ ವಿರುದ್ಧದ 7 ಕೇಸ್ ಹಿಂಪಡೆಯಲು ಮುಂದಾದ ಯೋಗಿ ಸರ್ಕಾರ

ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ವಿರುದ್ಧ ದಾಖಲಾಗಿರುವ ಏಳು ಕೇಸ್ ಗಳನ್ನು ಹಿಂಪಡೆಯಲು ಯೋಗಿ ಆದಿತ್ಯನಾಥ್ ಸರ್ಕಾರ ಮುಂದಾಗಿದೆ.
ಬಿಜೆಪಿ ಶಾಸಕ ಸಂಗೀತ್ ಸೋಮ್ ವಿರುದ್ಧದ 7 ಕೇಸ್ ಹಿಂಪಡೆಯಲು ಮುಂದಾದ ಯೋಗಿ ಸರ್ಕಾರ

ಮೀರತ್: ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ವಿರುದ್ಧ ದಾಖಲಾಗಿರುವ ಏಳು ಕೇಸ್ ಗಳನ್ನು ಹಿಂಪಡೆಯಲು ಯೋಗಿ ಆದಿತ್ಯನಾಥ್ ಸರ್ಕಾರ ಮುಂದಾಗಿದೆ.

ಮೂಲಗಳ ಪ್ರಕಾರ, 2013ರಿಂದ 2017ರ ವರೆಗೆ ಮುಜಾಫರ್ ನಗರ, ಶಹರನಾಪುರ್, ಮೀರತ್ ಹಾಗೂ ಗೌತಮ್ ಬುದ್ಧ ನಗರದಲ್ಲಿ ಸಂಗೀತ್ ಸೋಮ್ ವಿರುದ್ಧ ದಾಖಲಾಗಿದ್ದ ಏಳು ಪ್ರಕರಣಗಳನ್ನು ಹಿಂಪಡೆಯಲು ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ.

2013ರಲ್ಲಿ ಮುಜಾಫರ್ ನಗರದಲ್ಲಿ ನಡೆದ ದಂಗೆಯಲ್ಲಿ ಭಾಗಿ, ಶಹರನಾಪುರ್ ಮತ್ತು ಗೌತಮ್ ಬುದ್ಧನಗರದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿದ ಪ್ರಕರಣ ಸೇರಿದಂತೆ ಸಂಗೀತ್ ವಿರುದ್ಧ ದಾಖಲಾಗಿರುವ ಪ್ರಕರಣಗಳ ಮಾಹಿತಿ ನೀಡುವಂತೆ ಸರ್ಕಾರ ಕಾನೂನು ಇಲಾಖೆ ಸೂಚಿಸಿದೆ. 

ಉತ್ತರ ಪ್ರದೇಶ ಸರ್ಕಾರ ಸಂಗೀತ್ ಸೋಮ್ ವಿರುದ್ಧದ ಏಳು ಪ್ರಕರಣ ಸೇರಿದಂತೆ ಒಟ್ಟು ದಂಗೆಗಳಿಗೆ ಸಂಬಂಧಿಸಿದ ಒಟ್ಟು 74 ಕೇಸ್ ಗಳನ್ನು ಹಿಂಪಡೆಯಲು ಮುಂದಾಗಿದೆ. ಆದರೆ ಇದಕ್ಕೆ ಕೋರ್ಟ್ ಇನ್ನೂ ಅನುಮತಿ ನೀಡಿಲ್ಲ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸೋಮ್, ರಾಜಕೀಯ ಕಾರಣಗಳಿಗಾಗಿ ಸಮಾಜವಾದಿ ಪಕ್ಷದ ನಾಯಕರು ತಮ್ಮ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಪೊಲೀಸರು ಇನ್ನೂ ಚಾರ್ಜ್ ಶೀಟ್ ಸಹ ಸಲ್ಲಿಸಿಲ್ಲ. ತಮ್ಮ ವಿರುದ್ಧದ ಸುಳ್ಳು ಪ್ರಕರಣಗಳನ್ನು ಸರ್ಕಾರ ಹಿಂಪಡೆದರೆ ಉತ್ತಮ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com