ದೇಶದ ಆರ್ಥಿಕತೆ ಅಸ್ತವ್ಯಸ್ಥ ಸ್ಥಿತಿಯಲ್ಲಿ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ

ದೇಶದ ಆರ್ಥಿಕತೆ ಕುರಿತಂತೆ ಸರ್ಕಾರವು ಏನನ್ನೂ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಟೀಕಿಸಿದೆ. 
ಅಭಿಶೇಕ್ ಮನು ಸಿಂಗ್ವಿ
ಅಭಿಶೇಕ್ ಮನು ಸಿಂಗ್ವಿ

ನವದೆಹಲಿ: ದೇಶದ ಆರ್ಥಿಕತೆ ಕುರಿತಂತೆ ಸರ್ಕಾರವು ಏನನ್ನೂ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಟೀಕಿಸಿದೆ. 

ದೇಶದಲ್ಲಿ ಆರ್ಥಿಕತೆ ಅಸ್ತವ್ಯಸ್ತವಾಗಿದೆ. ನೀತಿಗಳ ಪರಿಹಾರೋಪಾಯಗಳನ್ನೂ ಸೂಚಿಸದೆ, ಚಡಪಡಿಸುವುದು, ಆ ಕಡೆ, ಈ ಕಡೆ ನೋಡುವುದು ಬಿಟ್ಟು ಸರ್ಕಾರ ಬೇರೆ  ಏನನ್ನೂ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. 

ಆರ್ಥಿಕತೆಯ ಹತ್ತು  ವೈಫಲ್ಯಗಳನ್ನು ಪಟ್ಟಿ ಮಾಡಿದ ಅವರು, ಒಂದು ವರ್ಷದ ಹಿಂದಿನಿಂದ ಜುಲೈ ವರೆಗೆ ವಾಹನ  ಮಾರಾಟವು ಶೇ.31 ರಷ್ಟು ಕುಸಿದಿದೆ.. ಕಾರುಗಳಲ್ಲಿ ಶೇ. 23 ರಷ್ಟು, ದ್ವಿಚಕ್ರ ವಾಹನಗಳು ಶೇ. 12  ಮತ್ತು ಟ್ರಾಕ್ಟರುಗಳ ಮಾರಾಟ ಶೇ. 14 ರಷ್ಟು ಇಳಿಕೆಯಾಗಿದೆ ಎಂದು ಅವರು ಹೇಳಿದರು. ಷೇರು  ಮಾರುಕಟ್ಟೆಯಲ್ಲಿನ ಕುಸಿತವನ್ನು ಪ್ರಸ್ತಾಪಿಸಿದ ಸಿಂಗ್ವಿ ಬಿಎಸ್ಇ ಶೇ 5,  ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಶೇ 8 ರಷ್ಟು ಕುಸಿದಿದ್ದರೆ, ನಿಫ್ಟಿ ಶೇ 10  ರಷ್ಟು ಕುಸಿದಿವೆ. 

ಮೂರನೇ ವೈಫಲ್ಯ ಹೆಚ್ಚುತ್ತಿರುವ ವಿತ್ತಕೊರತೆ ಕುರಿತ ಮೋಸಗೊಳಿಸುವ  ಅಂಕಿ ಅಂಶವಾಗಿದೆ ಎಂದು ಅವರು ಹೇಳಿದ್ದಾರೆ. 2017-2018ರ ವಿತ್ತಕೊರತೆಯನ್ನು ಸಿಎಜಿ  ಮರು ಲೆಕ್ಕಾಚಾರ ಮಾಡಿದ್ದು, ಅದು ಶೇ 5.8 ರಷ್ಟಿದೆ ಎಂದು ಹಣಕಾಸು ಆಯೋಗ  ಒಪ್ಪಿಕೊಂಡಿದೆ. ಆದರೆ ಸರ್ಕಾರ ವಿತ್ತಕೊರತೆ ಶೇ.3.46ರಷ್ಟಿದೆ ಎಂಬ ತಪ್ಪು ಅಂಕಿ-ಅಂಶ ನೀಡುತ್ತಿದೆ ಸಿಂಘ್ವಿ ಹೇಳಿದ್ದಾರೆ. ಜಿಡಿಪಿ ಬೆಳವಣಿಗೆ ಕುಸಿತ ನಾಲ್ಕನೇ ವೈಫಲ್ಯವಾಗಿದೆ. ಜಿಡಿಪಿ ಎರಡಂಕಿ ವೃದ್ಧಿ ಮಾಡುವುದಾಗಿ ಸರ್ಕಾರ ಹೇಳಿಕೊಂಡಿದೆ. ಆದರೆ  ಜನವರಿ-ಮಾರ್ಚ್ 2019 ರ ನೈಜ  ಅಂಕಿ-ಅಂಶಗಳು ಶೇ 5.8 ರಷ್ಟಿದ್ದು, ಇದು ಮೋದಿ ಅಧಿಕಾರಾವಧಿಯಲ್ಲಿ ಅತ್ಯಂತ  ಕಡಿಮೆ ಬೆಳವಣಿಗೆಯಾಗಿದೆ. ಭಾರತದ ಜಿಡಿಪಿ ಪ್ರಗತಿ ಶೇ. 6.5 ಕ್ಕಿಂತ ಹೆಚ್ಚಿದೆ ಎಂದು ವಿಶ್ವದಲ್ಲಿ ಯಾರೂ ಹೇಳುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಕ್ಷೀಣಿಸುತ್ತಿರುವ  ಕಾರ್ಮಿಕ ಶ್ರಕ್ತಿ ಐದನೇ ವೈಫಲ್ಯವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. 

ರಿಯಲ್  ಎಸ್ಟೇಟ್ ಕ್ಷೇತ್ರದಲ್ಲಿ ಹಿಂಜರಿತ ಆರನೇ ವೈಫಲ್ಯವಾಗಿದೆ. ಕ್ರೆಡಿಟ್  ಏಜೆನ್ಸಿಗಳು ಕೆಳಮಟ್ಟಕ್ಕೆ ಆರ್ಥಿಕತೆಯನ್ನು ಅಂದಾಜಿಸುತ್ತಿರುವುದು ಏಳನೇ ವೈಫಲ್ಯವಾಗಿದೆ.  ರುಪಾಯಿ ಮೌಲ್ಯವನ್ನು  ನಿರಂತರವಾಗಿ ದುರ್ಬಲಗೊಳಿಸುತ್ತಿರುವುದು ಎಂಟನೇ ವೈಫಲ್ಯವಾಗಿದೆ. ಆಗಸ್ಟ್ ತಿಂಗಳಲ್ಲಿ ರೂಪಾಯಿ ಅತ್ಯಂತ ಕೆಟ್ಟದಾಗಿ ಕಾರ್ಯನಿರ್ವಹಿಸುತ್ತಿರುವ ಏಷ್ಯಾ ಕರೆನ್ಸಿಯಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದ್ದಾರೆ. 

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2018-19ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಭಾರತಕ್ಕೆ ಎಫ್ ಡಿಐ ಶೇ 7 ರಷ್ಟು ಕುಸಿದು 33.49 ಶತಕೋಟಿ ಡಾಲರ್ ಗೆ ತಲುಪಿರುವುದು ಒಂಬತ್ತನೇ ವೈಫಲ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಹತ್ತನೇ ವೈಫಲ್ಯವೆಂದರೆ, ವಿದೇಶಿ ಸ್ಥಾನಮಾನ ಹೂಡಿಕೆದಾರರು (ಎಫ್ ಪಿಐ) ಹಣವನ್ನು ವಾಪಸ್ ಪಡೆಯುತ್ತಿರುವುದಾಗಿದೆ. ದೇಶೀಯ ಮತ್ತು ಜಾಗತಿಕ ಅಂಶಗಳಿಂದಾಗಿ ಆಗಸ್ಟ್ ನಲ್ಲಿ ನಡೆದ ಏಳು ವಹಿವಾಟು ಅವಧಿಗಳಲ್ಲಿ ವಿದೇಶಿ ಹೂಡಿಕೆದಾರರು 9, 197 ಕೋಟಿ ರೂ. ಹಣವನ್ನು ಷೇರು ಮಾರುಕಟ್ಟೆಗಳಿಂದ ವಾಪಸ್ ಪಡೆದಿದ್ದಾರೆ ಎಂದು ಸಿಂಘ್ವಿ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com