ತಿರುವನಂತಪುರಂ: ಹಿಮಾಚಲ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಮಲಯಾಳಂ ಖ್ಯಾತ ನಟಿ ಮಂಜು ವಾರಿಯರ್ ಹಾಗೂ ಆಕೆ ಜೊತೆಗಿದ್ದ ಇನ್ನಿತರ 30 ಮಂದಿಯನ್ನು ರಕ್ಷಿಸಿ ಮನಾಲಿಗೆ ಕರೆ ತರಲಾಗಿದೆ ಎಂದು ಕೇಂದ್ರ ಸಚಿವ ವಿ. ಮುರಳೀಧರನ್ ಇಂದು ಹೇಳಿದ್ದಾರೆ.
ಶಿಮ್ಲಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಂ ಠಾಕೂರ್, ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿಟಿಯ ಜಿಲ್ಲೆಯ ಛಾತ್ರು ಪ್ರದೇಶದಲ್ಲಿ ಸಿಲುಕಿದ್ದ ಮಂಜು ವಾರಿಯರ್ ಸೇರಿದಂತೆ ಇನ್ನಿತರ 127 ಮಂದಿಯನ್ನು ಮನಾಲಿಗೆ ಕರೆ ತಂದಿರುವುದಾಗಿ ತಿಳಿಸಿದರು.
ನಟಿ ಮಂಜು ವಾರಿಯರ್ ಹಾಗೂ ಇನ್ನಿತರರನ್ನು ಸುರಕ್ಷಿತವಾಗಿ ಸಂಕಷ್ಟದಿಂದ ಪಾರು ಮಾಡುವಂತೆ ಜೈರಾಮ್ ಠಾಕೂರ್ ಅವರೊಂದಿಗೆ ಮಾತನಾಡಿದ್ದೇನೆ. ಇಂದು ಸಂಜೆ ಮನಾಲಿಗೆ ಅವರನ್ನು ಕರೆತರಲಾಗಿದೆ ಎಂದು ಮುರುಳೀಧರನ್ ಟ್ವೀಟ್ ಮಾಡಿದ್ದಾರೆ.
ಮಂಜು ವಾರಿಯರ್ ಹಾಗೂ ನಿರ್ಮಾಪಕ ಸುನಾಲ್ ಕುಮಾರ್ ಶಶಿಧರನ್ ಮತ್ತಿತರ ತಂಡ ಛಾತ್ರು ಪ್ರದೇಶದಲ್ಲಿ ಮಲಯಾಳಂನ ಕಾಯ್ಯಾಟಂ ಚಿತ್ರದ ಚಿತ್ರೀಕರಣದಲ್ಲಿ ತೊಡಗಿತ್ತು. ಆದರೆ, ಪ್ರವಾಹದಿಂದಾಗಿ ಮಂಡಿ- ಲೆಹ್ ಹೆದ್ದಾರಿ ಕುಸಿತಗೊಂಡು ಮಂಜು ವಾರಿಯರ್ ಮತ್ತಿತರರು ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ.
Advertisement