1987ಕ್ಕೆ ಮುನ್ನ ಜನಿಸಿದವರು ಭಾರತೀಯರು, ಅಂಥವರ ಮಕ್ಕಳೂ ನೈಜ ಪ್ರಜೆಗಳೇ: ಕೇಂದ್ರ ಸ್ಪಷ್ಟನೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ, ಹಿಂಸಾಚಾರ ತೀವ್ರವಾಗಿರುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯ ಭಾರತೀಯ ಪೌರತ್ವ ಪಡೆಯಲು ಪೌರತ್ವ ಕಾಯ್ದೆಯಡಿ ಇರುವ ಐದು ಷರತ್ತುಗಳನ್ನು ಬಿಡುಗಡೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ, ಹಿಂಸಾಚಾರ ತೀವ್ರವಾಗಿರುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯ ಭಾರತೀಯ ಪೌರತ್ವ ಪಡೆಯಲು ಪೌರತ್ವ ತಿದ್ದುಪಡಿ ಕಾಯ್ದೆಯಡಿ ಇರುವ ಷರತ್ತುಗಳನ್ನು ವಿವರವಾಗಿ ಬಿಡುಗಡೆ ಮಾಡಿದೆ.


ಹಾಗಾದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಷರತ್ತುಗಳು ಯಾವ್ಯಾವುದು ಅಂದರೆ ಅದು ಹೀಗಿದೆ: 


-1987ರ ಮೊದಲು ಭಾರತದಲ್ಲಿ ಜನಿಸಿದವರು ಅಥವಾ ಅವರ ಪೋಷಕರು 1987ರ ಮೊದಲು ಭಾರತದಲ್ಲಿ ಜನಿಸಿದ್ದರೆ ಸಹಜವಾಗಿ ಭಾರತದ ಪೌರತ್ವ ಸಿಗುತ್ತದೆ. ಇಂತವರು ಪೌರತ್ವ ತಿದ್ದುಪಡಿ ಕಾಯ್ದೆ 2019 ಅಥವಾ ರಾಷ್ಟ್ರೀಯ ಪೌರತ್ವ ದಾಖಲಾತಿ(ಎನ್ ಆರ್ ಸಿ) ಬಗ್ಗೆ ಆತಂಕಪಡುವ ಅಗತ್ಯವಿಲ್ಲ. 


2004ರಲ್ಲಿ ಪೌರತ್ವ ಕಾಯ್ದೆಗೆ ಆದ ತಿದ್ದುಪಡಿಯಂತೆ ಅಸ್ಸಾಂ ನಾಗರಿಕರನ್ನು ಹೊರತುಪಡಿಸಿ ದೇಶದ ಉಳಿದ ನಾಗರಿಕರ ಪೋಷಕರಲ್ಲಿ ಯಾರಾದರೊಬ್ಬರು ಭಾರತೀಯನಾಗಿದ್ದರೆ ಮತ್ತು ಇಬ್ಬರೂ ಅಕ್ರಮ ವಲಸಿಗರಾಗಿರದಿದ್ದರೆ ಅಂತವರನ್ನು ಭಾರತೀಯ ನಾಗರಿಕರು ಎಂದು ಪರಿಗಣಿಸಲಾಗುತ್ತದೆ.


ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ಅನೇಕ ಸಂದೇಹಗಳು, ಸುಳ್ಳು ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬಿ ಪ್ರತಿಭಟನೆಯ ಕಾವನ್ನು ಇನ್ನಷ್ಟು ಹೆಚ್ಚಿಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ. 
1987ರ ಮೊದಲು ಭಾರತದಲ್ಲಿ ಜನಿಸಿದವರು ಅಥವಾ ಆ ವರ್ಷದ ಮೊದಲು ವ್ಯಕ್ತಿಯ ಪೋಷಕರು ಭಾರತದಲ್ಲಿ ಹುಟ್ಟಿದ್ದರೆ ಕಾನೂನಿನ ಪ್ರಕಾರ ಸಹಜವಾಗಿ ಅವರಿಗೆ ಭಾರತದ ಪೌರತ್ವ ಸಿಗುತ್ತದೆ. 


ಅಸ್ಸಾಂ ರಾಜ್ಯದ ವಿಚಾರದಲ್ಲಿ 1971ರ ಮೊದಲು ಇಲ್ಲಿ ನೆಲೆಸಿದ್ದವರನ್ನು ಭಾರತದ ನಾಗರಿಕತ್ವಕ್ಕೆ ಗುರುತಿಸಲಾಗುತ್ತದೆ. 


1955ರ ಪೌರತ್ವ ಕಾಯ್ದೆ ಪ್ರಕಾರ, 1950, ಜನವರಿ 26ಕ್ಕೆ ಭಾರತದಲ್ಲಿ ನಿವಾಸ ಹೊಂದಿದ್ದವರು ಅಥವಾ ಭಾರತದ ಪ್ರಾಂತ್ಯದೊಳಗೆ ಜನಿಸಿದವರಿಗೆ ಸಂವಿಧಾನ ವಿಧಿ 5ರಡಿ ಭಾರತದ ನಾಗರಿಕತೆ ಸಿಗಲಿದೆ ಎಂದು ಅಧಿಸೂಚನೆ ಹೇಳುತ್ತದೆ.


ಮಗುವಿನ ಪೋಷಕರು ಭಾರತದಲ್ಲಿ ಜನಿಸಿದ್ದರೆ ಅಥವಾ 1950ರ ಜನವರಿ 26 ಅಥವಾ ಅದಕ್ಕಿಂತ ನಂತರ 1987ರ ಜುಲೈ 1ರೊಳಗೆ ಯಾವುದೇ ವ್ಯಕ್ತಿ ಭಾರತದಲ್ಲಿ ಜನಿಸಿದ್ದರೆ, ಹುಟ್ಟಿನಿಂದಲೇ ಆತ ಅಥವಾ ಅವಳು ಭಾರತದ ಪ್ರಜೆ ಎನಿಸಿಕೊಳ್ಳುತ್ತಾರೆ.
2004ರ ಡಿಸೆಂಬರ್ 3ರ ನಂತರ ಭಾರತದಲ್ಲಿ ಹುಟ್ಟಿದ ವ್ಯಕ್ತಿಯ ಪೋಷಕರು ಭಾರತೀಯರಾಗಿದ್ದರೆ ಅಥವಾ ಮಗುವಿನ ಜನನ ಸಮಯದಲ್ಲಿ ಪೋಷಕರಲ್ಲಿ ಯಾರಾದರೊಬ್ಬರು ಅಕ್ರಮ ವಲಸಿಗರಾಗಿರದಿದ್ದರೆ ಮತ್ತು ಮತ್ತೊಬ್ಬ ಭಾರತೀಯನಾಗಿದ್ದರೆ ಹುಟ್ಟಿನಿಂದಲೇ ಭಾರತದ ಪೌರತ್ವ ಸಿಗುತ್ತದೆ.


ಪೂರ್ವಜರ ಪೌರತ್ವವನ್ನು ತೆಗೆದುಕೊಂಡರೆ, 1950ರ ಜನವರಿ 26ರ ನಂತರ ಆದರೆ 1992ರ ಡಿಸೆಂಬರ್ 10ರೊಳಗೆ ಭಾರತದ ಹೊರಗೆ ಜನಿಸಿದವರು ಇವರ ಜನನ ಸಮಯದಲ್ಲಿ ಮಗುವಿನ ತಂದೆ ಭಾರತೀಯನಾಗಿದ್ದರೆ ಹುಟ್ಟಿದ ಮಗುವಿಗೆ ಸಹ ಭಾರತದ ಪೌರತ್ವ ಸಿಗುತ್ತದೆ.


ಭಾರತದ ಪ್ರಜೆಗಳಾಗಿರುವ ವ್ಯಕ್ತಿಗಳ ಅಪ್ರಾಪ್ತ ಮಕ್ಕಳು ಭಾರತದ ಪ್ರಜೆಯಾಗಿ ನೋಂದಾಯಿಸಲು ಅರ್ಹರಾಗಿದ್ದಾರೆ, ಮತ್ತು ಪೂರ್ಣ ವಯಸ್ಸು ಮತ್ತು ಪೋಷಕರು ಭಾರತದ ಪ್ರಜೆಗಳಾಗಿ ನೋಂದಾಯಿಸಿಕೊಂಡಿದ್ದರೆ ಮಕ್ಕಳಿಗೆ ಕೂಡ ಭಾರತದ ಪೌರತ್ವ ಸಿಗುತ್ತದೆ. 


12 ವರ್ಷಗಳ ಕಾಲ ಭಾರತದಲ್ಲಿ ವಾಸವಿದ್ದರೆ ಅಂತವರಿಗೆ ಇಲ್ಲಿನ ಪೌರತ್ವ ಸಹಜವಾಗಿ ಸಿಗುತ್ತದೆ ಎಂದು ಸಹ ಗೃಹ ಸಚಿವಾಲಯದ ಅಧಿಸೂಚನೆಯಲ್ಲಿ ವಿವರಿಸಲಾಗಿದೆ. ಇನ್ನು ಯಾವುದಾದರೂ ಹೊಸ ಪ್ರಾಂತ್ಯ ಭಾರತ ದೇಶಕ್ಕೆ ಸೇರಿದರೆ ಆ ಪ್ರಾಂತ್ಯದಲ್ಲಿರುವ ಜನರು ಭಾರತದ ನಾಗರಿಕತ್ವ ಪಡೆಯುತ್ತಾರೆ. ಅಧಿಸೂಚನೆ ಹೊರಡಿಸಿದ ದಿನದಿಂದ ಅಲ್ಲಿನ ಜನರಿಗೆ ಭಾರತದ ಪೌರತ್ವ ಸಿಗುತ್ತದೆ. ಇದು ಗೋವಾ, ದಮನ್ ಮತ್ತು ಡಿಯು, ಸಿಕ್ಕಿಂ ಮತ್ತು ಹಲವು ಬಾಂಗ್ಲಾದೇಶದ ಭಾಗದ ಜನರಿಗೆ 2014ರಲ್ಲಿ ಭಾರತದ ಪೌರತ್ವ ಸಿಕ್ಕಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com