ಉರಿಯನ್ನೂ ಮೀರಿಸಿದ ಪುಲ್ವಾಮ ಭಯೋತ್ಪಾದಕ ದಾಳಿ: ಪಾಕ್ ಗೆ ಭಾರತದ ವಿದೇಶಾಂಗ ಇಲಾಖೆ ತರಾಟೆ!
ದೇಶ
ಉರಿಯನ್ನೂ ಮೀರಿಸಿದ ಪುಲ್ವಾಮ ಭಯೋತ್ಪಾದಕ ದಾಳಿ: ಪಾಕ್ ಗೆ ಭಾರತದ ವಿದೇಶಾಂಗ ಇಲಾಖೆ ತರಾಟೆ!
ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಪಾಕಿಸ್ತಾನದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ದಾಳಿಗೆ 40 ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಪಾಕಿಸ್ತಾನದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ದಾಳಿಗೆ 40 ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ದಶಕಗಳಲ್ಲಿ ಇದೇ ಕಾಶ್ಮೀರದಲ್ಲಿ ನಡೆದಿರುವ ಅತಿ ಭೀಕರವಾದ ದಾಳಿಯಾಗಿದ್ದು, ಉರಿ ದಾಳಿಯನ್ನೂ ಮೀರಿಸಿದ್ದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2,500 ಕ್ಕೂ ಹೆಚ್ಚು ಸಿಆರ್ ಪಿಎಫ್ ಸಿಬ್ಬಂದಿಗಳು ಸಂಚರಿಸುತ್ತಿದ್ದ ವಾಹನಗಳನ್ನು ಟಾರ್ಗೆಟ್ ಮಾಡಿರುವ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆತ್ಮಾಹುತಿ ದಾಳಿ ಉಗ್ರ ಸ್ಫೋಟಕವನ್ನು ಹೊಂದಿದ್ದ ಸ್ಕಾರ್ಪಿಯೋ ಕಾರನ್ನು ಸಿಆರ್ ಪಿಎಫ್ ಸಿಬ್ಬಂದಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನುಗ್ಗಿಸಿದ್ದಾನೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು, 5 ಯೋಧರು ತೀವ್ರವಾಗಿ ಗಾಯಗೊಂಡಿದ್ದು 92 ಬೇಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ರಜೆ ಮುಕ್ತಾಯಗೊಳಿಸಿ ಕಣಿವೆಯಲ್ಲಿ ಕರ್ತವ್ಯಕ್ಕೆ ವಾಪಸ್ ಹಾಜರಾಗುತ್ತಿದ್ದ ಯೋಧರೂ ಇದ್ದರು.
ದಾಳಿ ನಡೆಸಿದ ಉಗ್ರ ಅದಿಲ್ ಅಹ್ಮದ್ ದರ್ ಜೆಇಎಂ ನ ವಕ್ತಾರನಾಗಿದ್ದು ಘಟನೆಗೆ ಪಾಕ್ ನ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹೊಣೆ ಹೊತ್ತುಕೊಳ್ಳುತ್ತಿದ್ದಂತೆಯೇ ಭಾರತದ ವಿದೇಶಾಂಗ ಇಲಾಖೆ ಪಾಕಿಸ್ತಾನವನ್ನು ವಿಶ್ವಸಂಸ್ಥೆಯಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಸಿಅರ‍್ ಪಿಎಫ್ ಯೋಧರ ಮೇಲೆ ದಾಳಿ ನಡೆಸಿರುವ ಹೀನ ಕೃತ್ಯವನ್ನು ಪಾಕಿಸ್ತಾನದ ಮೂಲದ ಹಾಗೂ ಪಾಕಿಸ್ತಾನದ ಬೆಂಬಲ ಹೊಂದಿರುವ ಉಗ್ರ ಸಂಘಟನೆಯಾದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದೆ. ಈ ಉಗ್ರ ಸಂಘಟನೆಗೆ ಮಸೂದ್ ಅಜರ್ ಎಂಬ ಅಂತಾರಾಷ್ಟ್ರೀಯ ಭಯೋತ್ಪಾದಕನ ನೇತೃತ್ವವಿದ್ದು, ಭಾರತ ಹಾಗೂ ಇತರ ಪ್ರದೇಶಗಳಲ್ಲಿ ಉಗ್ರ ದಾಳಿ ನಡೆಸಲು ಪಾಕ್ ಸರ್ಕಾರದಿಂದ ಸಂಪೂರ್ಣ ಸ್ವಾತಂತ್ರ್ಯ ಪಡೆದಿದ್ದಾನೆ. ಭಾರತ ತನ್ನ ರಾಷ್ಟ್ರೀಯ ಭದ್ರತೆಯನ್ನು ಕಾಪಾಡಿಕೊಳ್ಳಲಿದೆ, ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ಹಾಗೂ ಭಯೋತ್ಪಾದಕರಿಗೆ ತನ್ನ ನೆಲದಲ್ಲಿ ಉಗ್ರ ಚಟುವಟಿಕೆಗಳಿಗೆ ಅವಕಾಶ ನೀಡುವುದನ್ನು ನಿಲ್ಲಿಸಬೇಕು ಎಂದು ವಿದೇಶಾಂಗ ಇಲಾಖೆ ಆಗ್ರಹಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ